-->
 76ನೇ ವಯಸ್ಸಿನಲ್ಲಿ ಅಂಗಾಂಗ ದಾನ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾನವೀಯ ಕಾರ್ಯ

76ನೇ ವಯಸ್ಸಿನಲ್ಲಿ ಅಂಗಾಂಗ ದಾನ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾನವೀಯ ಕಾರ್ಯ


ಗಂಗೊಳ್ಳಿಯ 76 ವರ್ಷದ ವೃದ್ದೆಯೊಬ್ಬರ ನಿಧನ ಬಳಿಕ ಅವರ ಕುಟುಂಬವು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸುವ ಮೂಲಕ ಜೀವ ಉಳಿಸುವ ಮಾನವೀಯ ಕಾರ್ಯಕ್ಕೆ ಮುಂದಾಗಿದೆ. 

ಹಠಾತ್ ತಲೆಸುತ್ತಿನಿಂದ ಅಸ್ವಸ್ಥಗೊಂಡ ಗಂಗೊಳ್ಳಿಯ ಜೆನ್ನಿ ಡಿ'ಸೋಜಾ ಅವರನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವದಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡ (ಬ್ರೇನ್ ಡೆಡ್) ರೋಗಿ ಎಂದು ವೈದ್ಯರು ಘೋಷಿಸಿದರು.

ಆತ್ಮೀಯರನ್ನು ಕಳೆದುಕೊಂಡ ದುಃಖದ ನಡುವೆಯೂ ಕುಟುಂಬದವರು ಮಾನವೀಯ ನಿರ್ಧಾರ ಕೈಗೊಂಡು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಇದರ ಫಲವಾಗಿ ಅವರ ಯಕೃತ್ತನ್ನು ಯಕೃತ್ತಿನ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಅವರ ನೇತ್ರಗಳು ದೃಷ್ಟಿಹೀನರಿಗೆ ಬೆಳಕಾಗಲಿದ್ದು, ಚರ್ಮವು ಸುಟ್ಟ ಗಾಯಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ನೆರವಾಗಲಿದೆ. ಈ ಮೂಲಕ ಅಂಗಾಂಗ ದಾನ ಮಾಡಲು ವಯಸ್ಸು ಅಡ್ಡಿಯಲ್ಲ ಎಂಬುದನ್ನು  ಸಾಬೀತುಪಡಿಸಿದೆ. ಈ ಅಂಗಾಂಗ ದಾನ ಪ್ರಕ್ರಿಯೆಯು ಕರ್ನಾಟಕ ಸರ್ಕಾರದ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಜೀವಸಾರ್ಥಕತೆಯ ಸಹಯೋಗದೊಂದಿಗೆ ಯಶಸ್ವಿಯಾಗಿ ನೆರವೇರಿತು. ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾ ಅಧಿಕಾರಿ ಡಾ. ಸುಧಾಕರ್ ಕಂಟಿಪುಡಿ, “ಅಂಗಾಂಗ ದಾನಕ್ಕೆ ವಯಸ್ಸು ಅಡ್ಡಿಯಲ್ಲ. ಈ ಕುಟುಂಬದ ಮಾನವೀಯ ನಿರ್ಧಾರ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿ,” ಎಂದು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article