ರಾಜ್ಯದಲ್ಲಿ 3.5 ಲಕ್ಷ ಬಿಪಿಎಲ್ ಕಾರ್ಡ್‌ಗಳ ರದ್ದತಿಗೆ ತಡೆ: ಪರಿಶೀಲನೆ ಬಳಿಕ ನಿರ್ಧಾರ- ರಿಜ್ವಾನ್ ಅರ್ಷದ್
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ರದ್ದು ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯಕ್ಕೆ ಈ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7.59 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಪೈಕಿ ಸುಮಾರು ನಾಲ್ಕು ಲಕ್ಷ ಕಾರ್ಡ್‌ಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಉಳಿದ ಸುಮಾರು 3.5 ಲಕ್ಷ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದರು. ಕಾರ್ಡ್‌ಗಳ ರದ್ದತಿಗೂ ಮುನ್ನ ಸೂಕ್ತ ಪರಿಶೀಲನೆ ನಡೆಸುವ ಅಗತ್ಯವಿದೆ. ಹೀಗಾಗಿ ಸದ್ಯಕ್ಕೆ ಯಾವುದೇ ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಮುಂದಿನ ಕ್ರಮದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪಡಿತರ ಚೀಟಿಗಳ KYC ಪ್ರಕ್ರಿಯೆ ಕುರಿತು ಮಾತನಾಡಿದ ಸಚಿವರು, ಸುಮಾರು ಐದು ವರ್ಷಗಳ ಹಿಂದೆ KYC ಮಾಡಲಾಗಿದ್ದು, ಇದೀಗ ಮತ್ತೊಮ್ಮೆ KYC ಮಾಡಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 2.59 ಕೋಟಿ ಪಡಿತರ ಚೀಟಿಗಳಿಗೆ ಮರು KYC ಮಾಡಬೇಕಿದೆ. ಕಾರ್ಡ್‌ದಾರರು ಮೃತಪಟ್ಟಿರುವುದು, ಬಡತನ ರೇಖೆಗಿಂತ ಮೇಲಕ್ಕೆ ಬಂದಿರುವುದು ಅಥವಾ ಕಾರ್ಡ್ ಅಗತ್ಯವಿಲ್ಲದಿರುವಂತಹ ಮಾಹಿತಿಗಳು KYC ಮೂಲಕ ಲಭ್ಯವಾಗಲಿವೆ. ಈ ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಸೆಪ್ಟೆಂಬರ್ 30ರೊಳಗೆ KYC ಪೂರ್ಣಗೊಳಿಸುವಂತೆ ಸೂಚನೆ ಇದೆ ಎಂದು ಸಚಿವರು ತಿಳಿಸಿದರು.
ಕರಾವಳಿ ಭಾಗದಲ್ಲಿ ಕುಚ್ಚಲಕ್ಕಿ ನೀಡಬೇಕೆಂಬ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿದರು. ಆಯಾ ಪ್ರದೇಶಗಳ ಬೇಡಿಕೆಗೆ ಅನುಗುಣವಾಗಿ ಬದಲಾವಣೆ ಮಾಡಲಾಗಿದ್ದು, ಕರಾವಳಿ ಭಾಗದಲ್ಲೂ ಕುಚ್ಚಲಕ್ಕಿ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.