ಪ್ರಕೃತಿ ಮಡಿಲಲ್ಲಿ ದೇಶಭಕ್ತಿಯ ಕಹಳೆ: ಸಾಲಿಗ್ರಾಮ ಕಯಾಕಿಂಗ್ ತಂಡದಿಂದ ವಿಶಿಷ್ಟ ಧ್ವಜಾರೋಹಣ
ಪ್ರಕೃತಿ ಪ್ರೇಮದ ಜೊತೆಗೆ ದೇಶಪ್ರೇಮದ ಸಂದೇಶ ಸಾರುವ ಉದ್ದೇಶದಿಂದ ಸಾಲಿಗ್ರಾಮ ಕಯಾಕಿಂಗ್ ತಂಡವು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿತು.
ಸೀತಾ ನದಿಯ ಮಧ್ಯಭಾಗದಲ್ಲಿ ನೀರಿನ ಆರ್ಭಟದ ನಡುವೆ ಮರದ ಸೇತುವೆ ನಿರ್ಮಿಸಿ, ಅದರ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ತಂಡದ ಸದಸ್ಯರು ರಾಷ್ಟ್ರಪ್ರೇಮವನ್ನು ಮೆರೆದರು. ಪ್ರಕೃತಿಯ ಮಡಿಲಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ‘ಪ್ರಕೃತಿ ಉಳಿಸಿ, ದೇಶ ಬೆಳೆಸಿ’ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಸಾರಿದರು.
ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿಯ ಸೌಂದರ್ಯವನ್ನು ಪರಿಚಯಿಸುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡವು ಪ್ರತಿವರ್ಷವೂ ಸ್ವಾತಂತ್ರ್ಯ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದೆ. ಈ ಹಿಂದೆ ನದಿಯ ಮಧ್ಯಭಾಗಕ್ಕೆ ಕಯಾಕಿಂಗ್ ಮೂಲಕ ತೆರಳಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ್ದ ತಂಡ, ಈ ಬಾರಿ ಕಾಂಡ್ಲಾ ಮರಗಳ ನಡುವೆ ಸೇತುವೆ ನಿರ್ಮಿಸಿ ಅದರ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ಗಮನ ಸೆಳೆಯಿತು.
“ಬದುಕು ಕೊಟ್ಟ ನಾಡ ಮಣ್ಣಲಿ, ಬಂಧಗಳ ಸೇತುವೆ ಕಟ್ಟಿ, ದೇಶಭಕ್ತಿಯ ನೂಲ ಬಿಗಿದು, ನಾಡಿನ ಹೆಮ್ಮೆ ಮೇಲೇಳಲಿ” ಎಂಬ ಆಶಯದೊಂದಿಗೆ ರೂಪಿಸಲಾದ ಈ ವಿನೂತನ ಕಾರ್ಯಕ್ರಮವು ಪ್ರಕೃತಿ ಮತ್ತು ದೇಶಪ್ರೇಮದ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು.
ನಮ್ಮ ನಾಡು, ನಮ್ಮ ನದಿ, ನಮ್ಮ ಪ್ರಕೃತಿ ಹಾಗೂ ನಮ್ಮ ರಾಷ್ಟ್ರಧ್ವಜವನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ ತಂಡವು ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಮೆರುಗು ನೀಡಿತು. ಪ್ರಕೃತಿಯನ್ನು ಸಂರಕ್ಷಿಸುವ ಜವಾಬ್ದಾರಿಯ ಜೊತೆಗೆ ದೇಶದ ಮೇಲಿನ ಅಭಿಮಾನವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
ಈ ವಿಶೇಷ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ಕಯಾಕಿಂಗ್ ತಂಡದ ಮುಖ್ಯಸ್ಥ ಮಿಥುನ್ ಕುಮಾರ್ ಮೆಂಡನ್, ಲೋಕೇಶ್ ಸೇರಿದಂತೆ ತಂಡದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.