ಹೆಬ್ರಿ ವೈದ್ಯ ದಂಪತಿ ಆಶ್ರಯದಲ್ಲಿರುವ ಪಾರ್ಶ್ವವಾಯು ಪೀಡಿತನ ಕೂಗಿಗೆ ಜಿಲ್ಲಾಡಳಿತ ಮೌನ
ಕಳೆದ ಮೂರು ತಿಂಗಳಿನಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿರುವ ನಿರ್ಗತಿಕ ವ್ಯಕ್ತಿಯೊಬ್ಬರ ಸಂಕಷ್ಟಕ್ಕೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಮೂಲದ ಮೂವಾಟ್ಟುಪುಳದ ರಾಯೇಲ್ ಪೌಲ್ (48) ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಅಸಹಾಯಕ ಸ್ಥಿತಿಯಲ್ಲಿ ಬೀದಿಪಾಲಾಗಿದ್ದರು. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರುವ ಉದ್ದೇಶದಿಂದ ಮೂರು ತಿಂಗಳ ಹಿಂದೆ ಅವರನ್ನು ಆಂಬ್ಯುಲೆನ್ಸ್ ಮೂಲಕ ಪತ್ರಿಕಾಗೋಷ್ಠಿಗೆ ಕರೆತಂದು, ಸೂಕ್ತ ಆಶ್ರಯ ಮತ್ತು ಚಿಕಿತ್ಸಾ ನೆರವು ಕಲ್ಪಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಈವರೆಗೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರಿಣಾಮಕಾರಿ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಹೆಬ್ರಿಯ ರಾಘವೇಂದ್ರ ಆಸ್ಪತ್ರೆಯ ಡಾ. ಭಾರ್ಗವಿ ಐತಾಳ್ ಹಾಗೂ ಅವರ ಪತಿ ಮಾನವೀಯ ನೆಲೆಯಲ್ಲಿ ರಾಯೇಲ್ ಪೌಲ್ ಅವರಿಗೆ ಆಶ್ರಯ ಕಲ್ಪಿಸಿ, ಕಳೆದ ಮೂರು ತಿಂಗಳಿನಿಂದ ಆರೈಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳು ₹30 ಸಾವಿರಕ್ಕೂ ಅಧಿಕ ವೆಚ್ಚವಾಗುತ್ತಿದ್ದರೂ ವೈದ್ಯ ದಂಪತಿ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ರೋಗಿಯ ಆರೈಕೆಗೆ ಮುಂದಾಗಿರುವುದು ಪ್ರಶಂಸನೀಯವಾಗಿದೆ.
ತಾನು ತನ್ನ ಊರಿಗೆ ತೆರಳಿ ಕುಟುಂಬದವರೊಂದಿಗೆ ಬದುಕಬೇಕು ಎಂದು ರಾಯೇಲ್ ಪೌಲ್ ಕಣ್ಣೀರಿಡುತ್ತಾ ಮನವಿ ಮಾಡುತ್ತಿದ್ದಾರೆ. ಹೀಗಾಗಿ ಕನಿಷ್ಠ ಅವರ ಆಧಾರ್ ಕಾರ್ಡ್ ಅಥವಾ ಲಭ್ಯವಿರುವ ದಾಖಲೆಗಳ ಆಧಾರದ ಮೇಲೆ ಸಂಬಂಧಿಕರನ್ನು ಪತ್ತೆಹಚ್ಚಿ, ಅವರನ್ನು ಕುಟುಂಬದವರೊಂದಿಗೆ ಸೇರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ವಿಶು ಶೆಟ್ಟಿ ಒತ್ತಾಯಿಸಿದ್ದಾರೆ.
"ಸಂಬಂಧಪಟ್ಟ ಇಲಾಖೆ ಆಶ್ರಯ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಮಾನವೀಯ ನೆಲೆಯಲ್ಲಿ ರೋಗಿಯ ನೆರವಿಗೆ ಬರಬೇಕು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳನ್ನು ಗೌರವಿಸುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿಹಿಡಿಯಬೇಕು" ಎಂದು ಅವರು ಹೇಳಿದ್ದಾರೆ.
ಡಾ. ಭಾರ್ಗವಿ ಐತಾಳ್ ದಂಪತಿ ನೆರವು ನೀಡದಿದ್ದರೆ ರಾಯೇಲ್ ಪೌಲ್ ಮತ್ತೆ ಬೀದಿಪಾಲಾಗುವ ಪರಿಸ್ಥಿತಿ ಎದುರಾಗುತ್ತಿತ್ತು. ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದಿದ್ದರೂ ನಿರ್ಲಕ್ಷ್ಯ ಮುಂದುವರಿದಿರುವುದು ವಿಷಾದನೀಯ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ಇದೇ ವೇಳೆ, ಕೆಲವು ವರ್ಷಗಳ ಹಿಂದೆ ಮಣಿಪಾಲದ ರಸ್ತೆಯೊಂದರಲ್ಲಿ ಚರಂಡಿಗೆ ಬಿದ್ದ ಬೀದಿ ನಾಯಿಯನ್ನು ರಕ್ಷಿಸಲು ಅಧಿಕಾರಿಗಳು ತಕ್ಷಣ ಸ್ಪಂದಿಸಿದ ಘಟನೆಯನ್ನು ಉಲ್ಲೇಖಿಸಿರುವ ಅವರು, "ಬೀದಿ ನಾಯಿಗೆ ದೊರೆಯುವ ತ್ವರಿತ ರಕ್ಷಣೆ, ಅಸಹಾಯಕ ಮನುಷ್ಯನಿಗೆ ಏಕೆ ದೊರೆಯುತ್ತಿಲ್ಲ?" ಎಂದು ಪ್ರಶ್ನಿಸಿದ್ದಾರೆ.
"ಅಧಿಕಾರ ಬಲ, ಹಣ ಬಲ ಅಥವಾ ಜನಬಲ ಇಲ್ಲದ ನೊಂದ ವ್ಯಕ್ತಿಯ ಕೂಗಿಗೆ ಸ್ಪಂದನೆ ದೊರೆಯದಿರುವುದು ನ್ಯಾಯದ ಮರೀಚಿಕೆಯಾಗಿದೆ. ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ ರಾಯೇಲ್ ಪೌಲ್ ಅವರಿಗೆ ಸೂಕ್ತ ಆಶ್ರಯ, ಚಿಕಿತ್ಸೆ ಹಾಗೂ ಅವರ ಕುಟುಂಬದವರ ಪತ್ತೆಗೆ ಕ್ರಮ ಕೈಗೊಳ್ಳಬೇಕು" ಎಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
