-->
 ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ


ಉದ್ಯಮಿ ಡೇವಿಡ್‌ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶದ ಥಾಣಾ ಪಿಲ್ವ ನಿವಾಸಿ ರಾಜು (42),ಉತ್ತರಾಖಂಡ ನಿವಾಸಿ ಅಜಯ್‌ ರಸ್ತೋಗಿ @ ಅನ್ಮೋಲ್‌ (23), ಹಾಗೂ ಬಿಹಾರ ರಾಜ್ಯದ ಜಿಯಾಹುಲ್‌ ವಜೂಲ್‌ ಶೇಖ್‌ @ ದೀಪಕ್‌ (38), ಎಂಬವರನ್ನು ಕುಮಟಾ ಮತ್ತು ಭಟ್ಕಳ ಪೊಲೀಸರ ಸಹಕಾರದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆ.7ರಂದು ಮಧ್ಯಾಹ್ನ 3.45ರ ಸುಮಾರಿಗೆ ಡೇವಿಡ್‌ ಡಿಸೋಜಾ ಅವರು ಮುದರಂಗಡಿಯಲ್ಲಿರುವ ತಮ್ಮ ‘ಪ್ರಿನ್ಸ್‌ ಎಂಟರ್‌ಪ್ರೈಸಸ್‌’ ಕಚೇರಿಗೆ ಆಗಮಿಸಿ, ಬಳಿಕ ತಮ್ಮ ಥಾರ್‌ ವಾಹನದ ಚಾಲಕನ ಬದಿಯ ಬಾಗಿಲಿನ ಬಳಿ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತಲೆಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದರು.

ಈ ಕುರಿತು ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಮೂವರು ಆರೋಪಿಗಳು ಬಸ್ಸಿನಲ್ಲಿ ಭಟ್ಕಳದ ಕಡೆಗೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಬೈಂದೂರಿನ ಒತ್ತಿನೆಣೆ ಬಳಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ, ಮೂವರು ಆರೋಪಿಗಳು ಬಸ್ಸಿನಿಂದ ಇಳಿದು ಪರಾರಿಯಾಗಲು ಯತ್ನಿಸಿದರು.

ಈ ವೇಳೆ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದಾಗ, ಕಾಪು ಪೊಲೀಸ್‌ ಠಾಣೆಯ ಪಿಎಸ್‌ಐ ತೇಜಸ್ವಿ ಅವರನ್ನು ದೂಡಿ ಹಾಕಿ, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಪೊಲೀಸರತ್ತ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ, ಆತನನ್ನು ಹಾಗೂ ಪಿಸ್ತೂಲನ್ನು ವಶಕ್ಕೆ ಪಡೆದಿದ್ದಾರೆ. ರಾಜು, ಡೇವಿಡ್‌ ಡಿಸೋಜಾ ಅವರಿಗೆ ಗುಂಡು ಹಾರಿಸಿದ ಪ್ರಮುಖ ಆರೋಪಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜು ವಿರುದ್ಧ ಬೈಂದೂರು ಪೊಲೀಸ್‌ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪರಾರಿಯಾಗಿದ್ದ ಇನ್ನಿಬ್ಬರು ಆರೋಪಿಗಳಾದ ಅಜಯ್‌ ರಸ್ತೋಗಿ @ ಅನ್ಮೋಲ್‌ (23) ಹಾಗೂ ಜಿಯಾಹುಲ್‌ ವಜೂಲ್‌ ಶೇಖ್‌ @ ದೀಪಕ್‌ (38) ಕುಮಟಾ ಮತ್ತು ಭಟ್ಕಳ ಪೊಲೀಸರ ಸಹಕಾರದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿ ಕಾಪು ಪೊಲೀಸ್‌ ಠಾಣೆಯ ಪಿಎಸ್‌ಐ ತೇಜಸ್ವಿ ಗಾಯಗೊಂಡಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡ ಆರೋಪಿ ರಾಜು ಕೂಡ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಹಾಗೂ ಎರ್ಮಾಳ್‌ನಲ್ಲಿ ಬಿಟ್ಟು ಹೋಗಿದ್ದ ಮೋಟಾರ್‌ಸೈಕಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಪಾರಿ ಕೊಲೆಯ ಶಂಕೆ

ಡೇವಿಡ್‌ ಡಿಸೋಜಾ ಅವರು ನಡೆಸುತ್ತಿದ್ದ ಕಾಮಗಾರಿಗೆ ಸಂಬಂಧಿಸಿದಂತೆ ಅನ್ಯರಾಜ್ಯದ ಕಂಪೆನಿಯೊಂದಿಗಿನ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿದ್ದು, ಇದೇ ಹಿನ್ನೆಲೆಯಲ್ಲಿ ಅವರನ್ನು ಹತ್ಯೆ ಮಾಡಲು ಸುಪಾರಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯಕ್ಕೆ ಸಹಕರಿಸಿದವರು, ಹಣಕಾಸಿನ ನೆರವು ನೀಡಿದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾಪು ವೃತ್ತ ನಿರೀಕ್ಷಕ ಅಝ್ಮತ್‌ ಆಲಿ ಜಿ., ಡಿಎಸ್‌ಬಿ ವಿಭಾಗದ ಪಿಐ ಹರೀಶ್‌, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್‌, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್‌ ಕಾಯ್ಕಿಣಿ ಸೇರಿದಂತೆ ವಿವಿಧ ಪೊಲೀಸ್‌ ಠಾಣೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಭಟ್ಕಳ ಮತ್ತು ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾ ತಂಡ, ಬೆರಳಚ್ಚು ವಿಭಾಗ, ಶ್ವಾನದಳ ಹಾಗೂ ಸಿಡಿಆರ್‌ ಸೆಲ್‌ ಉಡುಪಿ ತಂಡಗಳು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ.

Ads on article

Advertise in articles 1

advertising articles 2

Advertise under the article