ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಆಟಿ ತಿನಿಸುಗಳ ಮಹಾಭೋಜನ: ಸರತಿ ಸಾಲಿನಲ್ಲಿ ಕಾದು ಊಟ ಸವಿದ ಜನ
Thursday, August 06, 2026
ಕರಾವಳಿಯ ಸಂಸ್ಕೃತಿ, ಸಂಪ್ರದಾಯ ಮತ್ತು ಆಹಾರ ವೈವಿಧ್ಯತೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಪರೂಪದ ಪ್ರಯತ್ನವಾಗಿ ಮಣಿಪಾಲದ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಆಯೋಜಿಸಿದ್ದ "ಆಟಿದ ಸ್ಪೆಶಲ್ ಭೋಜನ"ಕ್ಕೆ ಜನಸಾಗರವೇ ಹರಿದು ಬಂದಿತು. ಆಷಾಢ ಮಾಸದ ಸಾಂಪ್ರದಾಯಿಕ ತಿನಿಸುಗಳನ್ನು ಒಂದೇ ಸೂರಿನಡಿ ಉಚಿತವಾಗಿ ಸವಿಯುವ ಅವಕಾಶ ಕಲ್ಪಿಸಿದ್ದರಿಂದ ನೂರಾರು ಭಕ್ತರು ಮತ್ತು ಆಹಾರಪ್ರಿಯರು ದೈವಸ್ಥಾನಕ್ಕೆ ಆಗಮಿಸಿ ಖಾದ್ಯಗಳ ಸವಿಯುಂಡರು.
ಒಟ್ಟು ಆರು ಬಫೆ ಕೌಂಟರ್‌ಗಳಲ್ಲಿ 50ಕ್ಕೂ ಹೆಚ್ಚು ಪ್ರಮುಖ ಖಾದ್ಯಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ 105 ಬಗೆಯ ಸಾಂಪ್ರದಾಯಿಕ ಆಟಿದ ತಿನಿಸುಗಳನ್ನು ಭಕ್ತರು ಉಚಿತವಾಗಿ ಸವಿಯುವ ಅವಕಾಶ ದೊರೆಯಿತು. ಪ್ರತಿಯೊಂದು ಖಾದ್ಯವೂ ಕರಾವಳಿಯ ಮನೆಮಾತಾದ ಸಾಂಪ್ರದಾಯಿಕ ಅಡುಗೆ ವಿಧಾನದಲ್ಲೇ ತಯಾರಾಗಿದ್ದು, ಹಿರಿಯರಿಂದ ಹಿಡಿದು ಯುವಕರವರೆಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಭೋಜನದಲ್ಲಿ ಚಿತ್ರಾನ್ನ, ಪುಳಿಯೋಗರೆ, ಇಂದ್ರಾಣಿ ರೈಸ್, ಗೀ ರೈಸ್, ಬಟಾಣಿ ಗಸಿ, ಕೂರ್ಮಾ, ಕೊಚ್ಚಿಗೆ ಅನ್ನ, ಟೊಮಾಟೊ ರೈಸ್ ಬಾತ್, ಪುದಿನ ರೈಸ್, ವಿವಿಧ ಬಗೆಯ ಪೋಡಿಗಳು, ಹಲಸಿನ ಬೀಜ ಚಟ್ನಿ, ಕೆಸುವಿನ ಎಲೆ ಚಟ್ನಿ, ಮಾವಿನಕಾಯಿ ಚಟ್ನಿ, ಮೊಳಕೆ ಹೆಸರು-ಬಟಾಟೆ ಗಸಿ, ಕಣಿಲೆ ಗಸಿ, ಪೆಜಕಾಯಿ ಗಸಿ, ಕುಡುತ ಸಾರ್, ಕುಂಬಳಕಾಯಿ ಮೊಸರು ಹುಳಿ, ಬೆಂಡೆ ಪುಳಿಮುಂಚಿ, ತೇವು ಗಸಿ, ತೊಜಂಕ್-ಅಂಬಡೆ ಸುಕ್ಕ, ಸೂರನ್ ಕಡ್ಲೆ ಗಸಿ, ಬೂದಿಕುಂಬಳ ಮೊಸರು ಹುಳಿ ಸೇರಿದಂತೆ ನಾನಾ ಬಗೆಯ ಸಾಂಪ್ರದಾಯಿಕ ಖಾದ್ಯಗಳು ಮೆನುಗೆ ಮೆರುಗು ತಂದವು.
ಇದರ ಜೊತೆಗೆ ಮೂಡೆ, ಬಾಳೆ ಎಲೆ ಗಟ್ಟಿ, ಅರಿಶಿನ ಎಲೆ ಗಟ್ಟಿ, ಹಲಸಿನ ಹಣ್ಣಿನ ಗಟ್ಟಿ, ಪತ್ರೋಡೆ, ಅಕ್ಕಿ ರೊಟ್ಟಿ, ಪರಡಿ ಪಾಯಸ, ಕಡ್ಲೆಬೇಳೆ ಪಾಯಸ, ಮಣ್ಣಿ, ಮುಳ್ಕ ಸೇರಿದಂತೆ ಹಲವು ಅಪರೂಪದ ಆಟಿದ ವಿಶೇಷ ತಿನಿಸುಗಳು ಭೋಜನದ ಪ್ರಮುಖ ಆಕರ್ಷಣೆಯಾಗಿದ್ದವು.
ಕಳೆದ ವರ್ಷ ಸುಮಾರು 6 ಸಾವಿರ ಮಂದಿ ಈ ವಿಶೇಷ ಭೋಜನದಲ್ಲಿ ಭಾಗವಹಿಸಿದ್ದರೆ, ಈ ಬಾರಿ ಆ ಸಂಖ್ಯೆ 15 ಸಾವಿರಕ್ಕೆ ಏರಿರುವುದು ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಯಿತು. ಹೆಚ್ಚಿದ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ದೈವಸ್ಥಾನದ ಆಡಳಿತ ಮಂಡಳಿ ಭವ್ಯ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸುಗಮವಾಗಿ ಭೋಜನ ಸವಿಯುವಂತೆ ವಿಶೇಷ ಕ್ರಮಗಳನ್ನು ಕೈಗೊಂಡಿತ್ತು.
ಬೆಳಗ್ಗಿನಿಂದಲೇ ದೈವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ರಸ್ತೆಯಲ್ಲಿ ಜನರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು. ಭೋಜನ ಸವಿಯಲು ಕಿಲೋಮೀಟರ್‌ಗಟ್ಟಲೆ ಸರತಿ ಸಾಲು ನಿರ್ಮಾಣವಾಗಿದ್ದರೂ, ಭಕ್ತರು ತಾಳ್ಮೆಯಿಂದ ತಮ್ಮ ಸರದಿಗಾಗಿ ಕಾಯುತ್ತಾ ಶಿಸ್ತಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನಸಂದಣಿಯನ್ನು ನಿಯಂತ್ರಿಸಲು ಸ್ವಯಂಸೇವಕರು ಹಾಗೂ ದೇವಸ್ಥಾನದ ಸಿಬ್ಬಂದಿ ನಿರಂತರವಾಗಿ ಕಾರ್ಯನಿರ್ವಹಿಸಿದರು.
ಆಟಿ ತಿಂಗಳ ಆಹಾರ ಪದ್ಧತಿ ಕೇವಲ ರುಚಿಗೆ ಸೀಮಿತವಾಗಿಲ್ಲ. ಆರೋಗ್ಯ, ಸ್ಥಳೀಯ ಕೃಷಿ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಕಾರ್ಯಕ್ರಮಗಳು ಮರೆಯಾಗುತ್ತಿರುವ ಸಾಂಪ್ರದಾಯಿಕ ತಿನಿಸುಗಳನ್ನು ಹೊಸ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ ಕರಾವಳಿಯ ಶ್ರೀಮಂತ ಆಹಾರ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ವದ ವೇದಿಕೆಯಾಗಿವೆ.
ಭೋಜನದಲ್ಲಿ ಭಾಗವಹಿಸಿದ್ದ ಅನೇಕರು ಇಂತಹ ಅಪರೂಪದ ತಿನಿಸುಗಳನ್ನು ಒಂದೇ ಕಡೆ ಉಚಿತವಾಗಿ ಸವಿಯುವ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ದೈವಸ್ಥಾನದ ಆಡಳಿತ ಮಂಡಳಿಯ ಅಚ್ಚುಕಟ್ಟಿನ ಆಯೋಜನೆ , ಸ್ವಯಂಸೇವಕರ ಸೇವಾ ಮನೋಭಾವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು.
