ಉಡುಪಿಯ ಉದ್ಯಮಿ, ಸಮಾಜಸೇವಕ ಸುದೇಶ್ ಭಟ್ ನಿಧನ
ಉಡುಪಿಯ ಕಲ್ಯಾಣಪುರ ನಿವಾಸಿ, ಯಶಸ್ವಿ ಉದ್ಯಮಿ ಹಾಗೂ ಸಮಾಜಸೇವಕರಾಗಿದ್ದ ಸುದೇಶ್ ಭಟ್ (56) ಅವರು ಬುಧವಾರ ರಾತ್ರಿ ನಿಧನರಾದರು.
ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಸುದೇಶ್ ಭಟ್ ಅವರು ಕ್ಯಾಟರಿಂಗ್ ಕ್ಷೇತ್ರದಲ್ಲಿ ಹೆಸರಾಂತ ಉದ್ಯಮಿಯಾಗಿದ್ದು, ಚ್ಯವನ ಕೆಮಿಕಲ್ ಇಂಡಸ್ಟ್ರೀಸ್, ಚ್ಯವನ ಲ್ಯಾಬ್ ಹಾಗೂ ಸೋಪ್ ವಾಟರ್ ಸೇರಿದಂತೆ ವಿವಿಧ ವಿತರಣಾ ಏಜೆನ್ಸಿಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದರು. ತಮ್ಮ ಕ್ಲಿನಿಕಲ್ ಲ್ಯಾಬೊರೇಟರಿಯ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದ ಅವರು, ವಿಶೇಷವಾಗಿ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಮಾನವೀಯ ಸೇವಾ ಮನೋಭಾವದಿಂದ ಎಲ್ಲರ ಪ್ರೀತಿ, ವಿಶ್ವಾಸ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.
ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ದೇವಸ್ಥಾನದ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ತಮ್ಮ ಪ್ರಾಮಾಣಿಕತೆ, ಕಾರ್ಯನಿಷ್ಠೆ ಮತ್ತು ದೂರದೃಷ್ಟಿಯ ಮೂಲಕ ದೇವಸ್ಥಾನದ ಬೆಳವಣಿಗೆಯಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು.
ಪ್ರಸಿದ್ಧ ಕ್ಯಾಟರರ್ ಆಗಿದ್ದ ಸುದೇಶ್ ಭಟ್ ಅವರು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಕಲ್ಯಾಣಪುರ ಜಿ.ಎಸ್.ಬಿ. ಸಮಾಜದ ಅನೇಕ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಶ್ರದ್ಧೆ, ನಿಷ್ಠೆ ಹಾಗೂ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ ಸಮಾಜದ ಮೆಚ್ಚುಗೆಗೆ ಪಾತ್ರರಾಗಿದ್ದರು.
ಅವರ ನಿಧನಕ್ಕೆ ವಿವಿಧ ಧಾರ್ಮಿಕ, ಸಾಮಾಜಿಕ ಮುಖಂಡರು, ಗಣ್ಯರು ಮತ್ತು ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.