-->
 ಉಡುಪಿ ರಥಬೀದಿಯಲ್ಲಿ ಪಾರಿವಾಳಗಳಿಗೆ ಆಹಾರ ನೀಡದಂತೆ ಆಗ್ರಹ

ಉಡುಪಿ ರಥಬೀದಿಯಲ್ಲಿ ಪಾರಿವಾಳಗಳಿಗೆ ಆಹಾರ ನೀಡದಂತೆ ಆಗ್ರಹ


ಉಡುಪಿ ಶ್ರೀಕೃಷ್ಣ ಮಠದ ರಥಬೀದಿಯಲ್ಲಿ ಪಾರಿವಾಳಗಳಿಗೆ ನಿತ್ಯ ಧಾನ್ಯಗಳನ್ನು ಆಹಾರವಾಗಿ ನೀಡುತ್ತಿರುವುದನ್ನು ನಿಯಂತ್ರಿಸಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಷೇಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ರಥಬೀದಿಯಲ್ಲಿ ಪಕ್ಷಿಪ್ರಿಯರು ಪಾರಿವಾಳಗಳಿಗೆ ನಿರಂತರವಾಗಿ ಆಹಾರ ನೀಡುತ್ತಿರುವ ಪರಿಣಾಮ ಸಾವಿರಾರು ಸಂಖ್ಯೆಯಲ್ಲಿ ಪಾರಿವಾಳಗಳು ಒಂದೆಡೆ ಸೇರುತ್ತಿವೆ. ರಥಬೀದಿಯು ಭಕ್ತರು, ಯಾತ್ರಾರ್ಥಿಗಳು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವ ಪ್ರದೇಶವಾಗಿದ್ದು, ಇಲ್ಲಿ ಪಾರಿವಾಳಗಳ ಮಲತ್ಯಾಜ್ಯದಿಂದ ಸ್ವಚ್ಛತೆ ಹಾಗೂ ಆರೋಗ್ಯದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.

ಪಾರಿವಾಳಗಳಿಂದ ಉಂಟಾಗುವ ಮಲತ್ಯಾಜ್ಯ ಹಾಗೂ ಇತರ ಮಾಲಿನ್ಯದಿಂದ ಮನುಷ್ಯರಲ್ಲಿ ಉಸಿರಾಟ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಎದುರಾಗುವ ಆತಂಕವಿದೆ. ವಿಶೇಷವಾಗಿ ಅಸ್ತಮಾ ಹಾಗೂ ಕ್ಷಯರೋಗದಿಂದ ಬಳಲುತ್ತಿರುವವರಿಗೆ ಇಂತಹ ಪರಿಸರ ಮತ್ತಷ್ಟು ತೊಂದರೆ ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಥಬೀದಿಯು ಧಾರ್ಮಿಕವಾಗಿ ಪವಿತ್ರ ಸ್ಥಳವಾಗಿರುವುದರಿಂದ ಜಿಲ್ಲಾಡಳಿತ, ನಗರಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಸಾರ್ವಜನಿಕ ಸ್ಥಳದಲ್ಲಿ ಪಾರಿವಾಳಗಳಿಗೆ ಆಹಾರ ವಿತರಿಸುವುದನ್ನು ನಿಯಂತ್ರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆದರೆ ಪಾರಿವಾಳಗಳಿಗೆ ಆಹಾರ ನೀಡುವ ಪಕ್ಷಿಪ್ರಿಯರ ಭಾವನೆಗಳಿಗೆ ಧಕ್ಕೆಯಾಗದಂತೆ, ಸೂಕ್ತವಾದ ಪರ್ಯಾಯ ಸ್ಥಳವನ್ನು ಗುರುತಿಸಿ ಅಲ್ಲಿ ಪಾರಿವಾಳಗಳಿಗೆ ಆಹಾರ ನೀಡಲು ಅವಕಾಶ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ ಪಕ್ಷಿಪ್ರಿಯರ ದಯಾಗುಣಕ್ಕೂ ಅವಕಾಶ ದೊರೆಯಲಿದೆ ಎಂದು ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ತಿಳಿಸಿದ್ದಾರೆ.

ಸಾರ್ವಜನಿಕ ಸ್ಥಳಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಉಂಟಾಗುವ ಆರೋಗ್ಯ ಹಾಗೂ ಸ್ವಚ್ಛತಾ ಸಮಸ್ಯೆಗಳ ಹಿನ್ನೆಲೆಯಲ್ಲಿ, ರಾಜ್ಯದ ನಗರ ಮತ್ತು ಮಹಾನಗರ ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆಗಳನ್ನು ನೀಡಿರುವುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ರಥಬೀದಿಯಲ್ಲಿಯೂ ಸೂಕ್ತ ನಿಯಮ ಜಾರಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

Ads on article

Advertise in articles 1

advertising articles 2

Advertise under the article