7 ಲಕ್ಷ ವಂಚನೆ ಯತ್ನ ಆರೋಪ: ಟೋಲ್‌ಗೇಟ್‌ನಲ್ಲಿ ರಬ್ಬರ್‌ಮರ ತುಂಬಿದ ಲಾರಿ ತಡೆ
ರಬ್ಬರ್ ಮರಗಳನ್ನು ಖರೀದಿಸುವುದಾಗಿ ಹೇಳಿ, ಪೂರ್ಣ ಹಣ ಪಾವತಿಸದೆ ಮರದ ತುಂಡುಗಳನ್ನು ಲಾರಿಯಲ್ಲಿ ಸಾಗಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ರಬ್ಬರ್ ಮರ ತುಂಬಿದ್ದ ತಮಿಳುನಾಡು ನೋಂದಣಿಯ ಲಾರಿಯನ್ನು ಪಡುಬಿದ್ರೆ ಟೋಲ್‌ಗೇಟ್ ಬಳಿ ಭಾನುವಾರ ತಡೆದು ನಿಲ್ಲಿಸಿದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಮುದ್ರಾಡಿ ಹಾಗೂ ಮುನಿಯಾಲು ಪ್ರದೇಶದಲ್ಲಿ ಸುಜಾತ ಶೆಟ್ಟಿ–ವಿಜೇಂದ್ರ ಶೆಟ್ಟಿ ಕುಟುಂಬ, ಆಶಾ ಆಚಾರ್ ಹಾಗೂ ಮುನಿಯಾಲಿನ ಸೀಜು ಎಂಬವರಿಗೆ ಸೇರಿದ ರಬ್ಬರ್ ಮರಗಳನ್ನು ಶಕೀಮ್ ಮತ್ತು ರಮೇಶ್ ನೇತೃತ್ವದ ತಂಡ ಖರೀದಿಸಿತ್ತು ಎನ್ನಲಾಗಿದೆ. ಮರಗಳನ್ನು ಕಡಿದು, ಮುಂಗಡ ಹಣ ಪಾವತಿಸಿ, ಉಳಿದ ಹಣವನ್ನು ಮರ ಸಾಗಿಸುವ ಸಂದರ್ಭದಲ್ಲಿ ನೀಡುವುದಾಗಿ ಒಪ್ಪಂದವಾಗಿತ್ತು. ಆದರೆ, ಬಳಿಕ ಬಾಕಿ ಹಣ ಪಾವತಿಸದೆ ಮರಗಳನ್ನು ಸಾಗಿಸಲು ಯತ್ನಿಸಲಾಗಿದೆ ಎಂದು ಮಾಲೀಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮರಗಳನ್ನು ಹಣ ಪಾವತಿಸದೆ ಸಾಗಿಸುವ ಸಾಧ್ಯತೆ ಇದೆ ಎಂದು ಶಂಕಿಸಿ, ಮೂರು ದಿನಗಳ ಹಿಂದೆಯೇ ಹೆಬ್ರಿ ಹಾಗೂ ಅಜೆಕಾರು ಪೊಲೀಸ್ ಠಾಣೆಗಳಿಗೆ ದೂರು ನೀಡಲಾಗಿತ್ತು.
ಭಾನುವಾರ ರಬ್ಬರ್ ಮರಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಮಾಹಿತಿ ಪಡೆದ ಸಂಬಂಧಪಟ್ಟವರು ಪಡುಬಿದ್ರೆ ಟೋಲ್‌ಗೇಟ್ ಬಳಿ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ವಂಚನೆ ಯತ್ನದ ಕುರಿತು ಮಾಹಿತಿ ಪಡೆದ ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅವರು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಲಾರಿ ತಡೆದು ನಿಲ್ಲಿಸುವಂತೆ ಸೂಚಿಸಿದ್ದರು ಎನ್ನಲಾಗಿದೆ. ಈ ಕುರಿತು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಅವರಿಗೂ ಮಾಹಿತಿ ನೀಡಲಾಗಿತ್ತು.
ಬಳಿಕ ಮಂಜುನಾಥ ಪೂಜಾರಿ ಅವರು ಪಡುಬಿದ್ರೆಗೆ ಭೇಟಿ ನೀಡಿ, ಆರೋಪದಿಂದ ವಂಚನೆಗೊಳಗಾದ ಕುಟುಂಬದವರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.
ರಬ್ಬರ್ ಮರಗಳನ್ನು ಕಡಿದ ಕಾರ್ಮಿಕರ ತಂಡಕ್ಕೂ ಹಣ ಪಾವತಿಯಾಗಿಲ್ಲ ಎನ್ನಲಾಗಿದ್ದು, ಮರ ಮಾಲೀಕರು ಹಾಗೂ ಕಾರ್ಮಿಕರು ಸೇರಿದಂತೆ ಒಟ್ಟು ನಾಲ್ವರಿಗೆ ಸುಮಾರು 7 ಲಕ್ಷ ರೂ. ವಂಚಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಮೂವರು ಹಾಗೂ ಅಜೆಕಾರು ಪೊಲೀಸ್ ಠಾಣೆಯಲ್ಲಿ ಒಬ್ಬರು ದೂರು ನೀಡಿದ್ದಾರೆ.
ರಬ್ಬರ್ ಮರ ಖರೀದಿಯ ಹೆಸರಿನಲ್ಲಿ ಮರಗಳನ್ನು ಕಡಿಸಿ, ಪೂರ್ಣ ಹಣ ಪಾವತಿಸದೆ ಸಾಗಿಸುವ ವ್ಯವಸ್ಥಿತ ಜಾಲವೇನಾದರೂ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸುವ ಅಗತ್ಯವಿದೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.