-->
ಶಿವಪುರ ಪಂಚಾಯತ್ ಸಿಬ್ಬಂದಿಯಿಂದ 7.50 ಲಕ್ಷ ಹಣ ದುರ್ಬಳಕೆ ಆರೋಪ: ಪ್ರಕರಣ ದಾಖಲು

ಶಿವಪುರ ಪಂಚಾಯತ್ ಸಿಬ್ಬಂದಿಯಿಂದ 7.50 ಲಕ್ಷ ಹಣ ದುರ್ಬಳಕೆ ಆರೋಪ: ಪ್ರಕರಣ ದಾಖಲು


ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯತ್ ಬಿಲ್ಲು ಸಂಗ್ರಹಕ ಮಂಜುನಾಥ್ ಅವರು ಮನೆ ತೆರಿಗೆ ರೂಪದಲ್ಲಿ ಸಂಗ್ರಹಿಸಿದ ಹಣವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರು ಮಂಜುನಾಥ್ ಅವರನ್ನು ಪಂಚಾಯತ್ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ.

ಮಂಜುನಾಥ್ ಅವರು 2023–24ನೇ ಸಾಲಿನಲ್ಲಿ ಮನೆ ತೆರಿಗೆ ರೂಪದಲ್ಲಿ ವಸೂಲಿ ಮಾಡಿದ 1,18,367 ರೂ. ಹಾಗೂ 2024–25ನೇ ಸಾಲಿನಲ್ಲಿ ವಸೂಲಿ ಮಾಡಿದ 3,36,021 ರೂ. ಸೇರಿದಂತೆ ಒಟ್ಟು 4,54,388 ರೂ. ಹಣವನ್ನು ಪಂಚಾಯತ್ ಬ್ಯಾಂಕ್ ಖಾತೆಗೆ ಜಮಾ ಮಾಡದೆ ಸ್ವಂತ ಬಳಕೆಗೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ಆರೋಪಿಸಲಾಗಿದೆ.

ಹಣ ದುರುಪಯೋಗದ ವಿಚಾರ ಬೆಳಕಿಗೆ ಬಂದ ಬಳಿಕ ಶಿವಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ಮಂಜುನಾಥ್ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಬಳಿಕ ಮಂಜುನಾಥ್ ಅವರು ಸುಮಾರು 3 ಲಕ್ಷ ಹಣವನ್ನು ಪಂಚಾಯತ್ ಗೆ ಮರುಪಾವತಿಸಿದ್ದು, ಉಳಿದ ಹಣವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಪಿಡಿಒ ತಿಳಿಸಿದ್ದಾರೆ.

ಇದಲ್ಲದೆ, ಒಟ್ಟಾರೆ ಸುಮಾರು 7.50 ಲಕ್ಷದಷ್ಟು ಹಣವನ್ನು ಸ್ವಂತಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಶಿವಪುರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ ಅವರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಹೆಬ್ರಿ ಪೊಲೀಸರು ನಂಬಿಕೆ ದ್ರೋಹ ಹಾಗೂ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪಂಚಾಯತ್ ಮಟ್ಟದಲ್ಲಿ ಇಲಾಖಾ ಕ್ರಮ ಕೈಗೊಂಡ ಬೆನ್ನಲ್ಲೇ ಇದೀಗ ಪೊಲೀಸ್ ತನಿಖೆಯೂ ನಡೆಯುತ್ತಿದೆ.

Ads on article

Advertise in articles 1

advertising articles 2

Advertise under the article