ಉಡುಪಿ: ಮರಕ್ಕೆ ಡಿಕ್ಕಿಯಾಗಿ ಚರಂಡಿಗೆ ಉರುಳಿದ ಬುಲೆಟ್: ಯುವಕ ಸಾವು
Tuesday, August 11, 2026
ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಉಡುಪಿಯ ಹೆರ್ಗಾ ಗ್ರಾಮದ ಕೆಳಪರ್ಕಳ ಡೌನ್‌ನಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಮೃತರನ್ನು ಆತ್ರಾಡಿ ನಿವಾಸಿ ಸನತ್ (21) ಎಂದು ಗುರುತಿಸಲಾಗಿದೆ. ಸನತ್ ಮಣಿಪಾಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಸನತ್ ತನ್ನ ಸ್ನೇಹಿತರೊಂದಿಗೆ ಮಣಿಪಾಲಕ್ಕೆ ಬಂದು ಊಟ ಮುಗಿಸಿ ರಾತ್ರಿ ಸುಮಾರು 1.25ಕ್ಕೆ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಸ್ನೇಹಿತನಿಗೆ ಸೇರಿದ KA-20-EP-5934 ಸಂಖ್ಯೆಯ ಬುಲೆಟ್ ಬೈಕ್‌ನಲ್ಲಿ ಸನತ್ ಮನೆಗೆ ತೆರಳುವುದಾಗಿ ಹೇಳಿ ಮಣಿಪಾಲದಿಂದ ಪರ್ಕಳದತ್ತ ಪ್ರಯಾಣ ಬೆಳೆಸಿದ್ದರು.
ರಾತ್ರಿ ಸುಮಾರು 1.35ರ ವೇಳೆಗೆ, ಹೆರ್ಗಾ ಗ್ರಾಮದ ಕೆಳಪರ್ಕಳ ಡೌನ್‌ನ ಗೋಪಾಲಕೃಷ್ಣ ದೇವಸ್ಥಾನದ ಬಳಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೀರಾ ಬಲಭಾಗಕ್ಕೆ ತೆರಳಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸನತ್ ಬೈಕ್ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದವು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಸನತ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
.jpeg)