-->
ಥೈಲ್ಯಾಂಡ್ ಫ್ಯಾಷನ್ ವೇದಿಕೆಯಲ್ಲಿ ಉಡುಪಿಯ ಬಾಲಪ್ರತಿಭೆ ಸಚಿತಾ ರಾವ್ ಮುಡಿಗೇರಿದ ಕಿರೀಟ

ಥೈಲ್ಯಾಂಡ್ ಫ್ಯಾಷನ್ ವೇದಿಕೆಯಲ್ಲಿ ಉಡುಪಿಯ ಬಾಲಪ್ರತಿಭೆ ಸಚಿತಾ ರಾವ್ ಮುಡಿಗೇರಿದ ಕಿರೀಟ


ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿರುವ ಉಡುಪಿಯ ಬಾಲಪ್ರತಿಭೆ ಸಚಿತ ರಾವ್, ಥೈಲ್ಯಾಂಡ್‌ನಲ್ಲಿ ನಡೆದ ಪ್ರತಿಷ್ಠಿತ ‘ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್–2026’ ಫ್ಯಾಷನ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.


ಆಗಸ್ಟ್ 19ರಿಂದ 22ರವರೆಗೆ ಥೈಲ್ಯಾಂಡ್‌ನಲ್ಲಿ ನಡೆದ ಈ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿವಿಧ ದೇಶಗಳ ಪ್ರತಿಭಾನ್ವಿತ ಸ್ಪರ್ಧಿಗಳು ಭಾಗವಹಿಸಿದ್ದರು. ತೀವ್ರ ಪೈಪೋಟಿಯ ನಡುವೆಯೂ ಆತ್ಮವಿಶ್ವಾಸಭರಿತ ಹಾಗೂ ಮನಮೋಹಕ ಪ್ರದರ್ಶನ ನೀಡಿದ ಸಚಿತ ರಾವ್, ಎಲ್ಲರ ಗಮನ ಸೆಳೆದು ಅಂತಿಮವಾಗಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.


ಉಡುಪಿ ಪುತ್ತೂರು ನಿವಾಸಿಗಳಾದ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ದಂಪತಿಯ ಪುತ್ರಿಯಾಗಿರುವ ಸಚಿತ ರಾವ್, ಪ್ರಸ್ತುತ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಫ್ಯಾಷನ್ ಲೋಕದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಸಚಿತ, ಈವರೆಗೆ ಎಂಟು ವಿವಿಧ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದು, ವಿಶೇಷವೆಂದರೆ ಎಲ್ಲಾ ಎಂಟು ಸ್ಪರ್ಧೆಗಳಲ್ಲೂ ಪ್ರಶಸ್ತಿ ಗಳಿಸಿದ್ದಾರೆ.


ಮಗಳ ನಿರಂತರ ಪರಿಶ್ರಮ, ವೇದಿಕೆಯ ಮೇಲಿನ ಆತ್ಮವಿಶ್ವಾಸ, ಪ್ರತಿಭೆ ಹಾಗೂ ಕುಟುಂಬದ ನಿರಂತರ ಪ್ರೋತ್ಸಾಹವೇ ಈ ಮಹತ್ವದ ಅಂತರರಾಷ್ಟ್ರೀಯ ಸಾಧನೆಗೆ ಕಾರಣವಾಗಿದೆ ಎಂದು ತಂದೆ ಸಚಿನ್ ರಾವ್ ಸುದ್ದಿಗೋಷ್ಠಿಯಲ್ಲಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿತ ರಾವ್, ವಿದ್ಯಾಭ್ಯಾಸದ ಜತೆಗೆ ಮುಂದೆಯೂ ಫ್ಯಾಷನ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮತ್ತಷ್ಟು ಪ್ರತಿನಿಧಿಸುವ ಕನಸಿದ್ದು, ಭವಿಷ್ಯದಲ್ಲಿ ‘ಮಿಸ್ ಯೂನಿವರ್ಸ್’ ಆಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದೇನೆ ಎಂದು ತಿಳಿಸಿದರು.

ಬಾಲ್ಯದಲ್ಲೇ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಹೆಚ್ಚಿಸಿರುವ ಸಚಿತ ರಾವ್ ಅವರ ಸಾಧನೆ ಉಡುಪಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಚಿತ ರಾವ್ ಅವರ ತಾಯಿ ಅಶ್ವಿನಿ ರಾವ್, ಮೇಕಪ್ ಆರ್ಟಿಸ್ಟ್ ನಾಗಶ್ರೀ ರಾವ್, ದೀಪಿಕಾ, ಯಶಸ್ವಿನಿ ದೇವಾಡಿಗ ಹಾಗೂ ವಸಂತ್ ಉಪಸ್ಥಿತರಿದ್ದರು

Ads on article

Advertise in articles 1

advertising articles 2

Advertise under the article