ಪಣಂಬೂರು ಬಳಿ ಹೆದ್ದಾರಿ ಪಕ್ಕದ ಚರಂಡಿಗೆ ನುಗ್ಗಿ ಎಕ್ಸ್‌ಪ್ರೆಸ್ ಬಸ್ ಪಲ್ಟಿ
Friday, September 04, 2026
ಕಾರ್ಕಳದಿಂದ ಮಂಗಳೂರಿನತ್ತ ಬರುತ್ತಿದ್ದ ಎಕ್ಸ್‌ಪ್ರೆಸ್ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಚರಂಡಿಗೆ ನುಗ್ಗಿ ಪಲ್ಟಿಯಾದ ಘಟನೆ ಶುಕ್ರವಾರ ಬೆಳಗ್ಗೆ ಪಣಂಬೂರು ಎಂಸಿಎಫ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಅಪಘಾತದಲ್ಲಿ ಬೆಳ್ಮಣ್ ನಿವಾಸಿ ಆದಿತ್ಯ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಸ್‌ನಲ್ಲಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಸ್ ಪಲ್ಟಿಯಾದ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮಂಗಳೂರು ಉತ್ತರ ಸಂಚಾರ ಪೊಲೀಸರು, ಸಾರ್ವಜನಿಕರ ಸಹಕಾರದೊಂದಿಗೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದ್ದಾರೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.