-->
ಜಾಮೀನಿಗಾಗಿ ಕೋರ್ಟ್ ಗೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ವಂಚನೆ: ಇಬ್ಬರ ಬಂಧನ

ಜಾಮೀನಿಗಾಗಿ ಕೋರ್ಟ್ ಗೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ವಂಚನೆ: ಇಬ್ಬರ ಬಂಧನ


ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ, ಮತ್ತೊಬ್ಬ ವ್ಯಕ್ತಿಯ ಹೆಸರಿನಲ್ಲಿ ನ್ಯಾಯಾಲಯಕ್ಕೆ ಜಾಮೀನುದಾರನಾಗಿ ಹಾಜರಾಗಿ ವಂಚಿಸಲು ಯತ್ನಿಸಿದ ಆರೋಪದಲ್ಲಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಂಟ್ವಾಳದ ಉಮ್ಮರ್ ಫಾರೂಕ್ ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣವೊಂದರಲ್ಲಿ ನೋಮಾನ್ ಎಂಬ ಆರೋಪಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಫಾರೂಕ್ ಎಂಬಾತನು ಪ್ರಶಾಂತ್ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿಕೊಂಡು, ಕೆ.ಟಿ. ಮೊಹಮ್ಮದ್ ಎಂಬವರ ಹೆಸರು ಮತ್ತು ವಿಳಾಸವನ್ನು ನಕಲಿಯಾಗಿ ಸೃಷ್ಟಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಮತ್ತೊಬ್ಬ ವ್ಯಕ್ತಿಯಂತೆ ನಟಿಸಿ, ನ್ಯಾಯಾಲಯಕ್ಕೆ ಮೋಸ ಮಾಡುವ ಉದ್ದೇಶದಿಂದ ನಕಲಿ ಆಧಾರ್ ಕಾರ್ಡ್ ಅನ್ನು ಜಾಮೀನು ಪ್ರಕ್ರಿಯೆಯಲ್ಲಿ ಹಾಜರುಪಡಿಸಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಅವರು ಆಗಸ್ಟ್ 13ರಂದು ನೀಡಿದ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಆರೋಪಿಗಳ ಪತ್ತೆಗಾಗಿ ಮೇಲಾಧಿಕಾರಿಗಳ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕ ರತ್ನಾಕರ ಕೆ. ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತಂಡದಲ್ಲಿ ಎಎಸ್‌ಐ ಲೋಕೇಶ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಸಂತೋಷ್ ಹಾಗೂ ಜಗನ್ನಾಥ್ ನಾಯ್ಕ್, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಆನಂದ್, ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಹಾಗೂ ಹೇಮಂತ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

Ads on article

Advertise in articles 1

advertising articles 2

Advertise under the article