ಪಿಕಪ್ ವಾಹನದಲ್ಲಿ ಮಕ್ಕಳನ್ನು ನಿಲ್ಲಿಸಿಕೊಂಡು ಚಾಲನೆ: ಚಾಲಕನ ವಿರುದ್ಧ ಪ್ರಕರಣ
Saturday, September 12, 2026
ಪಿಕಪ್ ವಾಹನದ ಹಿಂಬದಿಯಲ್ಲಿ 8ರಿಂದ 10 ಮಕ್ಕಳನ್ನು ನಿಲ್ಲಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿದ ಆರೋಪದಡಿ ಕಾಪು ಪೊಲೀಸರು ವಾಹನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೆ.10ರಂದು ಸಂಜೆ ಸುಮಾರು 7.30ರ ವೇಳೆಗೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಕಟಪಾಡಿ ಅಂಡರ್ಪಾಸ್ ಬಳಿ ಎನ್ಎಚ್ 66ರ ಮಂಗಳೂರು–ಉಡುಪಿ ರಸ್ತೆಯಲ್ಲಿ ಘಟನೆ ನಡೆದಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ KL 33 B 7463 ನೋಂದಣಿಯ ಪಿಕಪ್ ವಾಹನದ ಚಾಲಕನು ವಾಹನದ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ, ವಾಹನದ ಹಿಂಬದಿಯ ಬಾಡಿಯಲ್ಲಿ ಸುಮಾರು 8ರಿಂದ 10 ಮಕ್ಕಳನ್ನು ನಿಲ್ಲಿಸಿಕೊಂಡು ಅಪಾಯ ಉಂಟಾಗುವ ರೀತಿಯಲ್ಲಿ ವಾಹನ ಚಲಾಯಿಸಿದ್ದಾನೆ ಎನ್ನಲಾಗಿದೆ.
ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಸೆ.11ರಂದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪಾಯಕಾರಿ ರೀತಿಯಲ್ಲಿ ಸಂಚರಿಸಿದ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿದಿದೆ.