ಸಕಾಲ ಸೇವೆ ವಿಳಂಬಕ್ಕೆ ಅಧಿಕಾರಿಗಳಿಗೆ ದಂಡ: ಸುಳ್ಳು ದೂರು ನೀಡಿದ ನಾಗರಿಕರಿಗೂ ದಂಡಾಸ್ತ್ರ!
ಸರ್ಕಾರಿ ಸೇವೆಗಳನ್ನು ನಿಗದಿತ ಸಮಯದಲ್ಲಿ ಒದಗಿಸುವಲ್ಲಿ ವಿಳಂಬ ಮಾಡುವ ಅಧಿಕಾರಿಗಳಿಗೆ ಹಾಗೂ ದುರುದ್ದೇಶದಿಂದ ಸುಳ್ಳು ದೂರು ಸಲ್ಲಿಸುವ ನಾಗರಿಕರಿಗೆ ದಂಡ ವಿಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸಕಾಲ ಕಾಯ್ದೆಗೆ ತಿದ್ದುಪಡಿ ತಂದಿದೆ.
‘ಕರ್ನಾಟಕ ಸಕಾಲ ಸೇವೆಗಳ (ತಿದ್ದುಪಡಿ) ಅಧಿನಿಯಮ, 2026’ರ ಅಡಿಯಲ್ಲಿ ಪರಿಹಾರ ವೆಚ್ಚ ಮತ್ತು ದಂಡದ ಮೊತ್ತವನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿದ್ದು, ನೂತನ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ.
ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಸರ್ಕಾರಿ ಸೇವೆಗಳನ್ನು ಒದಗಿಸಲು ಅಥವಾ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ವಿಫಲರಾದ ಸಂಬಂಧಪಟ್ಟ ಅಧಿಕಾರಿಗಳಿಂದ ವಿಳಂಬದ ಅವಧಿಗೆ ಅನುಗುಣವಾಗಿ ಪರಿಹಾರ ವೆಚ್ಚವನ್ನು ವಸೂಲಿ ಮಾಡಲಾಗುತ್ತದೆ.
ಪರಿಷ್ಕೃತ ದರಗಳ ಪ್ರಕಾರ, ಮೊದಲ ಐದು ದಿನಗಳ ವಿಳಂಬಕ್ಕೆ ದಿನಕ್ಕೆ 20ರಂತೆ ಗರಿಷ್ಠ 100, ಆರರಿಂದ ಹತ್ತು ದಿನಗಳ ವಿಳಂಬಕ್ಕೆ ದಿನಕ್ಕೆ 40ರಂತೆ ಗರಿಷ್ಠ 300 ಹಾಗೂ 11ರಿಂದ 15 ದಿನಗಳ ವಿಳಂಬಕ್ಕೆ ದಿನಕ್ಕೆ 60ರಂತೆ ಗರಿಷ್ಠ 600 ಪರಿಹಾರ ನಿಗದಿಪಡಿಸಲಾಗಿದೆ.
ಅದೇ ರೀತಿ, 16ರಿಂದ 20 ದಿನಗಳ ವಿಳಂಬಕ್ಕೆ ದಿನಕ್ಕೆ 80ರಂತೆ ಗರಿಷ್ಠ 1,000 ಹಾಗೂ 21ರಿಂದ 25 ದಿನಗಳ ವಿಳಂಬಕ್ಕೆ ದಿನಕ್ಕೆ 100ರಂತೆ ಗರಿಷ್ಠ 1,500 ಪರಿಹಾರ ವಿಧಿಸಲಾಗುತ್ತದೆ.
ಸೇವೆಯಲ್ಲಿ ಲೋಪದೋಷಗಳಿದ್ದರೆ ಅಥವಾ ಸೂಕ್ತ ಕಾರಣವಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದ್ದರೆ, ಸಂಬಂಧಪಟ್ಟ ಅಧಿಕಾರಿಯಿಂದ ಗರಿಷ್ಠ 1,500 ಪರಿಹಾರ ವಸೂಲಿ ಮಾಡಿ ನಾಗರಿಕರಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
ಸರ್ಕಾರಿ ನೌಕರರಿಗೆ ಕಿರುಕುಳ ನೀಡುವ, ಬೆದರಿಸುವ ಅಥವಾ ಅವರಿಗೆ ಹಾನಿ ಉಂಟುಮಾಡುವ ಉದ್ದೇಶದಿಂದ ಸುಳ್ಳು ಕುಂದುಕೊರತೆ ದೂರುಗಳನ್ನು ಸಲ್ಲಿಸುವ ನಾಗರಿಕರ ವಿರುದ್ಧವೂ ಕ್ರಮ ಕೈಗೊಳ್ಳಲು ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ.
ತನಿಖೆಯಲ್ಲಿ ದೂರು ದುರುದ್ದೇಶಪೂರಿತ ಎಂಬುದು ಸಾಬೀತಾದರೆ, ಪ್ರತಿ ಅರ್ಜಿಗೆ 1,500 ದಂಡ ವಿಧಿಸಲಾಗುತ್ತದೆ. ಇದೇ ರೀತಿಯ ತಪ್ಪನ್ನು ಪುನರಾವರ್ತಿಸಿದರೂ ಪ್ರತಿ ಅರ್ಜಿಗೆ 1,500 ದಂಡ ವಿಧಿಸಲು ಅವಕಾಶವಿದೆ. ಆದರೆ, ಸಂಬಂಧಪಟ್ಟ ನಾಗರಿಕರಿಗೆ ತಮ್ಮ ಅಹವಾಲು ಮಂಡಿಸಲು ಸೂಕ್ತ ಅವಕಾಶ ನೀಡಿದ ಬಳಿಕವೇ ದಂಡ ವಿಧಿಸುವ ಆದೇಶ ಹೊರಡಿಸಲಾಗುತ್ತದೆ. ದಂಡದ ಮೊತ್ತವನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುತ್ತದೆ.
ಸರ್ಕಾರಿ ಸೇವೆಗಳ ವಿಲೇವಾರಿಯಲ್ಲಿ ಪಾರದರ್ಶಕತೆ ಹಾಗೂ ಜವಾಬ್ದಾರಿಯನ್ನು ಹೆಚ್ಚಿಸುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.