-->
 ಜ. 30, 31ರಂದು ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ‘ಪವರ್ ಫೆಸ್ಟ್ ’27’

ಜ. 30, 31ರಂದು ಉಡುಪಿಯಲ್ಲಿ ಮಹಿಳಾ ಉದ್ಯಮಿಗಳ ‘ಪವರ್ ಫೆಸ್ಟ್ ’27’


ಮಹಿಳಾ ಉದ್ಯಮಿಗಳ ಉತ್ಪನ್ನಗಳು, ಸೇವೆಗಳು ಹಾಗೂ ಪ್ರತಿಭೆಯನ್ನು ಪರಿಚಯಿಸುವ ಉದ್ದೇಶದಿಂದ ಪವರ್ (ಪ್ಲಾಟ್‌ಫಾರ್ಮ್ ಆಫ್ ವುಮೆನ್ ಎಂಟರ್‌ಪ್ರೆನ್ಯೂರ್ಸ್) ಸಂಸ್ಥೆಯ ವತಿಯಿಂದ ‘ಪವರ್ ಫೆಸ್ಟ್ ’27’ ಉತ್ಸವವನ್ನು 2027ರ ಜನವರಿ 30 ಮತ್ತು 31ರಂದು ಉಡುಪಿಯಲ್ಲಿ ಆಯೋಜಿಸಲಾಗಿದೆ.

ಈ ಬಗ್ಗೆ ಉಡುಪಿಯಲ್ಲಿ ಪ್ರದರ್ಶಕರ ಸಮಿತಿ ಅಧ್ಯಕ್ಷೆ ರಶ್ಮಿ ವಿಜಯೇಂದ್ರ ಮಾಹಿತಿ ನೀಡಿದರು. ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪ ಮತ್ತು ಮುದ್ದಣ್ಣ ಮಂಟಪದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಈ ಉತ್ಸವವು ಮಹಿಳಾ ಉದ್ಯಮಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ಮಾರಾಟ ಮಾಡಲು ಹಾಗೂ ಉದ್ಯಮವನ್ನು ವಿಸ್ತರಿಸಿಕೊಳ್ಳಲು ಉತ್ತಮ ವೇದಿಕೆಯಾಗಲಿದೆ ಎಂದರು. 

2009ರಲ್ಲಿ ಆರಂಭಗೊಂಡ ಪವರ್ ಸಂಸ್ಥೆಯು ಮಹಿಳಾ ಉದ್ಯಮಿಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಲಾಭರಹಿತ ಸರ್ಕಾರೇತರ ಸಂಸ್ಥೆಯಾಗಿದೆ. ಮಹಿಳಾ ಉದ್ಯಮಿಗಳು, ಕುಟುಂಬ ವ್ಯವಹಾರದಲ್ಲಿ ತೊಡಗಿರುವವರು ಹಾಗೂ ಹೊಸದಾಗಿ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಪರಸ್ಪರ ಕಲಿಕೆ, ಅನುಭವ ವಿನಿಮಯ ಮತ್ತು ಉದ್ಯಮ ಸಂಬಂಧಿತ ಸಂಪರ್ಕಗಳನ್ನು ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.


ಈ ಹಿಂದೆ ಸಂಸ್ಥೆಯು 2016ರಲ್ಲಿ ಮೊದಲ ಬಾರಿಗೆ ‘ಪರ್ಬ’ ಮೇಳವನ್ನು ಆಯೋಜಿಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಳಿಕ 2018, 2020, 2023 ಮತ್ತು 2025ರಲ್ಲಿ ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದೀಗ ಮಹಿಳಾ ಉದ್ಯಮಿಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ‘ಪವರ್ ಫೆಸ್ಟ್ ’27’ ಆಯೋಜಿಸಲಾಗುತ್ತಿದೆ.

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗೃಹಾಧಾರಿತ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವ ಮಹಿಳೆಯರು, ತಮ್ಮ ಉದ್ಯಮವನ್ನು ವಿಸ್ತರಿಸಲು ಬಯಸುವವರು ಹಾಗೂ ತಮ್ಮ ಹವ್ಯಾಸಗಳನ್ನು ಆದಾಯದ ಮೂಲವನ್ನಾಗಿ ಪರಿವರ್ತಿಸಿಕೊಳ್ಳಲು ಆಸಕ್ತಿ ಹೊಂದಿರುವ ಮಹಿಳೆಯರಿಗೆ ಈ ಉತ್ಸವದಲ್ಲಿ ಆದ್ಯತೆ ನೀಡಲಾಗುತ್ತದೆ. ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವುದು, ಖರೀದಿದಾರರೊಂದಿಗೆ ಸಂಪರ್ಕ ಕಲ್ಪಿಸುವುದು, ವ್ಯಾಪಾರ ಜಾಲ ವಿಸ್ತರಿಸುವುದು ಹಾಗೂ ಮಾರುಕಟ್ಟೆ, ನಿರ್ವಹಣೆ ಮತ್ತು ತಾಂತ್ರಿಕ ಜ್ಞಾನ ಹಂಚಿಕೊಳ್ಳುವುದು ಉತ್ಸವದ ಪ್ರಮುಖ ಉದ್ದೇಶಗಳಾಗಿವೆ.

ಉತ್ಸವದಲ್ಲಿ ಭಾಗವಹಿಸುವ ನೋಂದಾಯಿತ ಪ್ರತಿಯೊಬ್ಬ ಪ್ರದರ್ಶಕರಿಗೂ ಮೂಲಭೂತ ಪೀಠೋಪಕರಣ, ವಿದ್ಯುತ್ ಸಂಪರ್ಕ ಮತ್ತು ಬೆಳಕಿನ ವ್ಯವಸ್ಥೆ ಹೊಂದಿರುವ ಪ್ರತ್ಯೇಕ ಮಳಿಗೆಗಳನ್ನು ಒದಗಿಸಲಾಗುತ್ತದೆ. ದೂರದ ಊರುಗಳಿಂದ ಆಗಮಿಸುವ ಮಹಿಳೆಯರಿಗೆ ಅಗತ್ಯವಿದ್ದಲ್ಲಿ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ, ಬಟ್ಟೆ ಬದಲಾಯಿಸುವ ಕೊಠಡಿ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪ್ರದರ್ಶಕರಿಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಮಳಿಗೆ ಕಾಯ್ದಿರಿಸಲು 2027ರ ಜನವರಿ 5 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಪ್ರದರ್ಶಕರ ಸಮಿತಿ ಅಧ್ಯಕ್ಷರಾದ ಸುಪ್ರಿಯಾ ಕಾಮತ್ (ಮೊ. 9980152848) ಹಾಗೂ ರಶ್ಮಿ ವಿಜಯೇಂದ್ರ (ಮೊ. 9980550400) ಅವರನ್ನು ಸಂಪರ್ಕಿಸಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯಮಿಗಳು ಈ ಉತ್ಸವದಲ್ಲಿ ಭಾಗವಹಿಸಿ ತಮ್ಮ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಪಡೆದುಕೊಳ್ಳುವಂತೆ ರಶ್ಮೀ ಅವರು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷೆ ಹಾಗೂ ಸಂಘಟನಾ ಅಧ್ಯಕ್ಷೆ ವೀಣಾ ಕುಡ್ಡ, ಉಪಾಧ್ಯಕ್ಷೆ ತೃಪ್ತಿ ನಾಯಕ್, ಕಾರ್ಯದರ್ಶಿ ಸುಜಯಾ ಶೆಟ್ಟಿ, ಜಂಟಿ ಕಾರ್ಯದರ್ಶಿ ಶಾಲಿನಿ ಡಿ. ಬಂಗೇರ, ಖಜಾಂಚಿ ಪ್ರತಿಭಾ ಆರ್.ವಿ., ಸಲಹೆಗಾರ್ತಿ ಹಾಗೂ ಸಂಸ್ಥೆಯ ಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article