-->
ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಯಲು ಯತ್ನಿಸಿ ಕೊಲೆ ಬೆದರಿಕೆ: ಆರೋಪಿ ಬಂಧನ

ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಯಲು ಯತ್ನಿಸಿ ಕೊಲೆ ಬೆದರಿಕೆ: ಆರೋಪಿ ಬಂಧನ


ವ್ಯಕ್ತಿಯೊಬ್ಬರಿಗೆ ಬೊಲೆರೋ ವಾಹನದಿಂದ ಡಿಕ್ಕಿ ಹೊಡೆಯಲು ಯತ್ನಿಸಿ, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ವಿಟ್ಲ ಪೊಲೀಸರು ಜಗದೀಶ್ ಜೈನ್ ಎಂಬಾತನನ್ನು ಬಂಧಿಸಿದ್ದಾರೆ. 

ಬಂಟ್ವಾಳದ ಮಾಣಿ ನಿವಾಸಿ ವಿಕೇಶ್ ಕೆ. (32) ಅವರು ನೀಡಿದ ದೂರಿನ ಪ್ರಕಾರ, ನ.9ರಂದು ಸಂಜೆ ಮಾಣಿ ಜಂಕ್ಷನ್‌ನಲ್ಲಿರುವ ಮೈದಾನದ ಪಟಾಕಿ ಅಂಗಡಿಯ ಬಳಿ ನಿಂತಿದ್ದಾಗ, ಅವರಿಗೆ ಪರಿಚಯವಿರುವ ಜಗದೀಶ್ ಜೈನ್ ಎಂಬಾತ ಬೊಲೆರೋ ವಾಹನವನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆಯಲು ಯತ್ನಿಸಿದ್ದಾನೆ ಎನ್ನಲಾಗಿದೆ.

ವಾಹನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿಕೇಶ್ ಅವರು ಬೊಲೆರೋ ವಾಹನದ ಬಾನೆಟ್ ಮೇಲೆ ಹಾರಿದ್ದು, ಬಳಿಕ ಪಕ್ಕದಲ್ಲಿದ್ದ ಮಣ್ಣಿನ ಮೇಲೆ ಬಿದ್ದಿದ್ದಾರೆ. ಈ ವೇಳೆ ಅವರ ಎಡಕಾಲಿನ ಮೊಣಕಾಲಿಗೆ ಗಾಯವಾಗಿದೆ. ಇದೇ ಸಂದರ್ಭದಲ್ಲಿ ವಿಕೇಶ್ ಅವರ ಸಂಬಂಧಿಕ ತೀರ್ಥಪ್ರಸಾದ್ ಅವರಿಗೂ ವಾಹನದಿಂದ ಡಿಕ್ಕಿ ಹೊಡೆಯಲು ಆರೋಪಿ ಯತ್ನಿಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಘಟನಾ ಸ್ಥಳದಲ್ಲಿ ಜನರು ಸೇರುತ್ತಿರುವುದನ್ನು ಗಮನಿಸಿದ ಆರೋಪಿ, ವಿಕೇಶ್ ಅವರನ್ನು ಅವಾಚ್ಯವಾಗಿ ನಿಂದಿಸಿ, ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ ಸ್ಥಳದಿಂದ ತೆರಳಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article