-->
ಡಾನ್ ಹೇಮಂತ್ ಪೂಜಾರಿ ಪೊಲೀಸ್ ವಶಕ್ಕೆ?

ಡಾನ್ ಹೇಮಂತ್ ಪೂಜಾರಿ ಪೊಲೀಸ್ ವಶಕ್ಕೆ?


ಉಡುಪಿ ಜಿಲ್ಲೆಯ ಉದ್ಯಮಿಗಳಿಗೆ ದೂರವಾಣಿ ಕರೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಭೂಗತ ಕ್ರಿಮಿನಲ್ ಹೇಮಂತ್ ಪೂಜಾರಿಯನ್ನು ಮುಂಬೈ ಪೊಲೀಸರು ಮಲೇಷ್ಯಾದಲ್ಲಿ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ನೊಟೋರಿಯಸ್ ಕ್ರಿಮಿನಲ್ ಹೇಮಂತ್ ಪೂಜಾರಿ ಅಲಿಯಾಸ್ ‘ಎಚ್.ಪಿ.’ ಉಡುಪಿ ಜಿಲ್ಲೆಯ 17ಕ್ಕೂ ಹೆಚ್ಚಿನ ಬಿಲ್ಡರ್ ಗಳು, ಹೊಟೇಲ್ ಉದ್ಯಮಿಗಳು, ಸಿವಿಲ್ ಕಾಂಟ್ರಾಕ್ಟರುಗಳು, ಹಣವಂತ ರಾಜಕಾರಣಿಗಳು ಹಾಗೂ ದೊಡ್ಡ ದೊಡ್ಡ ಕಂಪೆನಿಗಳ ಮುಖ್ಯಸ್ಥರಿಗೆ ಅಂತರಾಷ್ಟ್ರೀಯ ಮೊಬೈಲ್ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸುತ್ತಿರುವ ಬಗ್ಗೆ, ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. 

ಈ ಮಧ್ಯೆ ಕಳೆದ ಸೆಪ್ಟಂಬರ್ ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಅವರನ್ನು ಹೇಮಂತ್ ಪೂಜಾರಿ ಸಹಚರರು ತಲೆಗೆ ಗುಂಡಿಕ್ಕಿ ಕೊಲೆ ಮಾಡಿದ್ದು, ಒಟ್ಟು 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯಾಗಿ ಹೆಸರಿಸಿ ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಪೊಲೀಸರು ಕಳೆದ ಅಕ್ಟೋಬರ್ ತಿಂಗಳಲ್ಲಿ ಹೇಮಂತ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಪ್ರಕರಣಗಳನ್ನು ದಾಖಲಿಸಿದ್ದು, ಹೇಮಂತ ಪೂಜಾರಿಗೆ ಸ್ಥಳೀಯ ಉದ್ಯಮಿಗಳ ಮಾಹಿತಿ ಮತ್ತು ಮೊಬೈಲ್ ನಂಬರ್ ಒದಗಿಸುತ್ತಿದ್ದ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಹಾಗೂ ಹರೀಶ್ ಪೂಜಾರಿ ಸಾಂತೂರು (45) ಎಂಬಿಬ್ಬರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. 

ಈ ಮಧ್ಯೆ ಹೇಮಂತ ಪೂಜಾರಿ ತನ್ನ ಸಹಚರರ ಬಂಧನವಾಗುವುದನ್ನು ತಡೆಯಲು ಪೊಲೀಸ್ ಅಧಿಕಾರಿಗಳ ಕುಟುಂಬ ವರ್ಗದವರಿಗೂ ಬೆದರಿಕೆ ಒಡ್ಡಿರುವುದು ಗುಟ್ಟಾಗಿ ಉಳಿದಿಲ್ಲ. 

ಈಗ 2 ದಿನಗಳ ಹಿಂದೆ, ಬೆದರಿಕೆ ಎದುರಿಸಿದ್ದ ಉಡುಪಿಯ ಉದ್ಯಮಿಯೋರ್ವರು ಗೃಹಮಂತ್ರಿ ಅಮಿತ್ ಷಾ ಅವರಿಗೆ ಆಪ್ತರೆನ್ನಲಾದ ಉದ್ಯಮಿಯ ಮೂಲಕ ಪ್ರಭಾವ ಬೀರಿ ಹೇಮಂತ್ ಪೂಜಾರಿ ಬೇಟೆಗೆ ಒತ್ತಡ ಹೇರಿದ್ದರು. ಆ ಪ್ರಕಾರ ಮುಂಬೈ ಪೊಲೀಸರು ಭಾರತದ ಅಂತರಾಷ್ಟ್ರೀಯ  ಗೂಡಚರ್ಯ ಸಂಸ್ಥೆ ‘ರಾ’ (RAW- Research and Analysis Wing) ತಂಡದ ಮೂಲಕ ಕಾರ್ಯಾಚರಣೆ ನಡೆಸಿ ಹೇಮಂತ ಪೂಜಾರಿ ಮಲೇಷ್ಯಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದರೆನ್ನಲಾಗಿದೆ. ಬಳಿಕ  ಮುಂಬೈಯಲ್ಲಿದ್ದ ಹೇಮಂತ ಪೂಜಾರಿಯ ಆಪ್ತರೊಬ್ಬರನ್ನು ಮಲೇಷ್ಯಾಕ್ಕೆ ಕರೆದುಕೊಂಡು ಹೋಗಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಹೇಮಂತ್ ಪೂಜಾರಿಯನ್ನು ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದು, ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ. 

ಹೆಸರಾಂತ ಹೊಟೇಲ್ ಉದ್ಯಮಿಯೋರ್ವರ ಹತ್ಯೆಗೆ ಹೇಮಂತ್ ಪೂಜಾರಿ ಸ್ಕೆಚ್ ಹಾಕಿರುವುದು ಮತ್ತು ಆ ಉದ್ದೇಶಕ್ಕಾಗಿ 40 ಲಕ್ಷದವರೆಗೆ ದೇಣಿಗೆ ಸಂಗ್ರಹಿಸಿರುವುದಾಗಿಯೂ ಹೇಮಂತ್ ಪೂಜಾರಿ ವಿಚಾರಣೆ ವೇಳೆ ಬಾಯಿ ಬಿಟ್ಟಿರುವುದಾಗಿ ತಿಳಿದು ಬಂದಿದೆ. 

ಆರೋಪಿ ಹೇಮಂತ ಪೂಜಾರಿಯನ್ನು ಭಾರತಕ್ಕೆ ಕರೆತರಲು ಕಾನೂನು ತೊಡಕುಗಳಿದ್ದು, ಅವುಗಳನ್ನು ನಿವಾರಿಸಲು ಸರಕಾರದ ಮಟ್ಟದಲ್ಲಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article