-->
ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ ನಿಷೇಧಾಜ್ಞೆ : ನ.7ರ ರಾತ್ರಿ 10ರವರೆಗೆ ಪ್ರತಿಭಟನೆ, ಮೆರವಣಿಗೆಗೂ ನಿರ್ಬಂಧ

ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ನ.3ರಿಂದ ನಿಷೇಧಾಜ್ಞೆ : ನ.7ರ ರಾತ್ರಿ 10ರವರೆಗೆ ಪ್ರತಿಭಟನೆ, ಮೆರವಣಿಗೆಗೂ ನಿರ್ಬಂಧ


ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ಉದ್ದೇಶದಿಂದ ಉಡುಪಿ ತಾಲೂಕಿನ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನವೆಂಬರ್ 3ರಿಂದ ನವೆಂಬರ್ 7ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪರಿಗಣಿಸಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅನ್ವಯ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

ನವೆಂಬರ್ 3ರ ಬೆಳಿಗ್ಗೆ 6 ಗಂಟೆಯಿಂದ ನವೆಂಬರ್ 7ರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರಣಿ, ಪ್ರತಿಭಟನೆ, ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಮುಷ್ಕರಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ವಿನಾಯಿತಿ ನೀಡಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಶಸ್ತ್ರಾಸ್ತ್ರ, ಬಡಿಗೆ, ಖಡ್ಗ, ಬಂದೂಕು, ಚೂರಿ, ಲಾಠಿ ಸೇರಿದಂತೆ ಅಪಾಯ ಉಂಟುಮಾಡಬಹುದಾದ ಮಾರಕಾಸ್ತ್ರಗಳನ್ನು ಕೊಂಡೊಯ್ಯುವುದು ಹಾಗೂ ಅವುಗಳೊಂದಿಗೆ ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಅಲ್ಲದೆ, ಕಲ್ಲುಗಳು, ಸ್ಫೋಟಕ ಹಾಗೂ ದಾಹಕ ವಸ್ತುಗಳನ್ನು ಕೊಂಡೊಯ್ಯುವುದು ಅಥವಾ ಸಂಗ್ರಹಿಸುವುದು, ಧ್ವನಿವರ್ಧಕಗಳ ಬಳಕೆ, ಪ್ರಚೋದನಕಾರಿ ಘೋಷಣೆ, ಹಾಡು, ಕೂಗಾಟ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ.

ನಿಷೇಧಾಜ್ಞೆ ಉಲ್ಲಂಘಿಸಿ ಮಾರಕಾಸ್ತ್ರ ಅಥವಾ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಹಾಗೂ ಸರ್ಕಾರಿ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article