ಪ್ರದೀಪ್ ಪೂಜಾರಿ ಪ್ರಕರಣ ಸಿಓಡಿ ತನಿಖೆಗೆ ವಹಿಸಲು ಆಗ್ರಹ: ನ.4ರಂದು ಬೃಹತ್ ಪ್ರತಿಭಟನೆಗೆ ಬಿಲ್ಲವ ಯುವ ವೇದಿಕೆ ಸಿದ್ಧತೆ
ಪೆರ್ಡೂರಿನ ಪ್ರದೀಪ್ ಪೂಜಾರಿ ಅವರ ಮೇಲಿನ ಹಲ್ಲೆ, ಆತ್ಮಹತ್ಯೆ ಪ್ರಕರಣದ ತನಿಖೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಿ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಬಿಲ್ಲವ ಯುವ ವೇದಿಕೆ ಆಗ್ರಹಿಸಿದೆ.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿರುವ ಮಾಹಿತಿ ಹಾಗೂ ವಿಡಿಯೋ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರೋಪಿಗಳಿಗೆ ಕ್ಲೀನ್ಚಿಟ್ ನೀಡಿದಂತೆ ತನಿಖೆಯ ವಿಚಾರಗಳು ಬಿಂಬಿತವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ತನಿಖೆಯ ಪಾರದರ್ಶಕತೆಯ ಕುರಿತು ಪ್ರಶ್ನೆಗಳು ಎದ್ದಿವೆ. ಪ್ರಕರಣದಲ್ಲಿ ಸಂಪೂರ್ಣ ಸತ್ಯಾಸತ್ಯತೆ ಹೊರಬರದಿದ್ದರೆ ಸಂತ್ರಸ್ತರಿಗೆ ನ್ಯಾಯ ದೊರೆಯುವುದು ಹೇಗೆ ಎಂಬ ಆತಂಕವೂ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಜ್ಯದ ಉನ್ನತ ಮಟ್ಟದ ತನಿಖಾ ಸಂಸ್ಥೆಯಾದ ಸಿಓಡಿಗೆ ವರ್ಗಾಯಿಸಿ, ಯಾವುದೇ ಪ್ರಭಾವ ಅಥವಾ ಒತ್ತಡಗಳಿಗೆ ಮಣಿಯದೆ ತನಿಖೆ ನಡೆಸಬೇಕು. ಘಟನೆಯ ಹಿಂದಿರುವ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಲ್ಲವ ಯುವ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ, ನ್ಯಾಯವಾದಿ ಪ್ರವೀಣ್ ಪೂಜಾರಿ ಒತ್ತಾಯಿಸಿದ್ದಾರೆ.
ಪ್ರಕರಣದ ಸತ್ಯಾಸತ್ಯತೆ ಹೊರಬಂದು ಸಂತ್ರಸ್ತರಿಗೆ ನ್ಯಾಯ ದೊರಕಬೇಕು ಎಂಬ ಉದ್ದೇಶದಿಂದ ಜಿಲ್ಲೆಯ ನ್ಯಾಯಪರ ಹೋರಾಟಗಾರರು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ನವೆಂಬರ್ 4ರಂದು ಬುಧವಾರ ಬೃಹತ್ ಪ್ರತಿಭಟನೆ ಹಾಗೂ ಜನಾಗ್ರಹ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರವೀಣ್ ಪೂಜಾರಿ ತಿಳಿಸಿದ್ದಾರೆ.
ಸಂತ್ರಸ್ತರಿಗೆ ನ್ಯಾಯ ದೊರಕುವವರೆಗೆ ಕಾನೂನುಬದ್ಧ ಹೋರಾಟ ಮುಂದುವರಿಸಲಾಗುವುದು ಎಂದು ಬಿಲ್ಲವ ಯುವ ವೇದಿಕೆ ತಿಳಿಸಿದೆ.