-->
 ಉಡುಪಿ:ಆಟೋ ಮೀಟರ್ ದರ ಏರಿಕೆಗೆ ಆಗ್ರಹ: ಕನಿಷ್ಠ ದರ 60ಕ್ಕೆ ಹೆಚ್ಚಿಸಲು ಆಟೋ ಚಾಲಕರ ಮನವಿ

ಉಡುಪಿ:ಆಟೋ ಮೀಟರ್ ದರ ಏರಿಕೆಗೆ ಆಗ್ರಹ: ಕನಿಷ್ಠ ದರ 60ಕ್ಕೆ ಹೆಚ್ಚಿಸಲು ಆಟೋ ಚಾಲಕರ ಮನವಿ


ಉಡುಪಿ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಮೀಟರ್ ದರವನ್ನು ಪರಿಷ್ಕರಿಸಿ, ಕನಿಷ್ಠ ಪ್ರಯಾಣ ದರವನ್ನು ಈಗಿರುವ 40ರಿಂದ 60ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲೆ ಆಶ್ರಯದಾತ ಆಟೋ ಯೂನಿಯನ್ ಹಾಗೂ ಉಡುಪಿ ನಗರದ ವಿವಿಧ ರಿಕ್ಷಾ ನಿಲ್ದಾಣಗಳ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಉಡುಪಿ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಕನಿಷ್ಠ ಮೀಟರ್ ದರ 40 ಹಾಗೂ ಪ್ರತಿ ಕಿಲೋಮೀಟರ್‌ಗೆ 30 ರನ್ನಿಂಗ್ ದರವನ್ನು ನಿಗದಿಪಡಿಸಲಾಗಿದ್ದು, ಈ ದರ ನಿಗದಿಯಾಗಿ ಸುಮಾರು ಐದು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಪೆಟ್ರೋಲ್, ಗ್ಯಾಸ್, ವಾಹನಗಳ ಬಿಡಿಭಾಗಗಳು ಹಾಗೂ ವಿಮೆ ದರಗಳು ಹೆಚ್ಚಾಗಿವೆ. ಇದರಿಂದ ಆಟೋ ರಿಕ್ಷಾ ಚಾಲಕರು ತಮ್ಮ ದೈನಂದಿನ ಜೀವನ ನಿರ್ವಹಣೆ ಹಾಗೂ ಕುಟುಂಬದ ಖರ್ಚುಗಳನ್ನು ನಿಭಾಯಿಸುವುದು ಕಷ್ಟಕರವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಕಳೆದ ಐದು ವರ್ಷಗಳಿಂದ ಆಟೋ ಮೀಟರ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದರೆ ಮಂಗಳೂರು ನಗರದಲ್ಲಿ ಈಗಾಗಲೇ ಮೀಟರ್ ದರ ಪರಿಷ್ಕರಣೆ ಮಾಡಲಾಗಿದೆ. ಅದೇ ಮಾದರಿಯಲ್ಲಿ ಉಡುಪಿ ಜಿಲ್ಲೆಯ ಆಟೋ ಚಾಲಕರಿಗೂ ನ್ಯಾಯಯುತ ದರ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಆದ್ದರಿಂದ ಉಡುಪಿ ಜಿಲ್ಲೆಯಲ್ಲಿ ಆಟೋ ರಿಕ್ಷಾಗಳ ಕನಿಷ್ಠ ಪ್ರಯಾಣ ದರವನ್ನು 60ಕ್ಕೆ ಹೆಚ್ಚಿಸಿ, ಪ್ರತಿ ಕಿಲೋಮೀಟರ್‌ಗೆ 30 ರನ್ನಿಂಗ್ ದರವನ್ನು ನಿಗದಿಪಡಿಸುವ ಮೂಲಕ ಮೀಟರ್ ದರವನ್ನು ಪರಿಷ್ಕರಿಸಬೇಕು ಎಂದು ಆಟೋ ಚಾಲಕರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article