ಗಾಡ್ಫಾದರ್ ಇಲ್ಲ… ಪರಿಶ್ರಮವೇ ಬಂಡವಾಳ! ‘ಜೈಲರ್ 2’ಗೆ ಉಡುಪಿಯ ಚೇತನ್ ಡಿಸೋಜಾ ಆಕ್ಷನ್ ಕಮಾಲ್!
ಸಿನಿಮಾ ರಂಗದಲ್ಲಿ ಗಾಡ್ಫಾದರ್ ಇಲ್ಲದೆ, ಸ್ವಂತ ಪರಿಶ್ರಮ, ಸಾಹಸದ ಮೇಲಿನ ಪ್ರೀತಿ ಹಾಗೂ ವಿಭಿನ್ನ ಕಲ್ಪನೆಯ ಬಲದಿಂದ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಉಡುಪಿಯ ಚೇತನ್ ಡಿಸೋಜಾ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರಕ್ಕೆ ಸಾಹಸ ನಿರ್ದೇಶನದ ಜವಾಬ್ದಾರಿ ನಿರ್ವಹಿಸುವ ಮೂಲಕ ಕರಾವಳಿಯ ಪ್ರತಿಭೆ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವತ್ತ ಹೆಜ್ಜೆಯಿಟ್ಟಿದೆ.
ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ಮೂಡುಬೆಳ್ಳೆ ನಿವಾಸಿ ಸ್ಟೆಲ್ಲಾ ಐಡಾ ಗಿಬ್ಬಾ ಡಿಸೋಜಾ ಹಾಗೂ ಆಂಡ್ರಿವ್ ಗ್ರೆಗರಿ ದಂಪತಿಯ ಪುತ್ರ ಚೇತನ್ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬವಲ್ಲ. ಇಂಜಿನಿಯರಿಂಗ್ ಶಿಕ್ಷಣ ಪೂರ್ಣಗೊಳಿಸಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಐಟಿ ವೃತ್ತಿ ಆರಂಭಿಸಿದ್ದ ಅವರು, ಬಾಲ್ಯದಿಂದಲೂ ಹೊಂದಿದ್ದ ಸಿನಿಮಾ ಮತ್ತು ಮಾರ್ಷಲ್ ಆರ್ಟ್ಸ್ ಮೇಲಿನ ಆಸಕ್ತಿಯನ್ನು ಬೆನ್ನಟ್ಟಿ ವಿಭಿನ್ನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು.
ಚೇತನ್ ಅವರ ಸಿನಿಮಾ ಪ್ರೀತಿಯ ಹಿಂದೆ ಕುಟುಂಬದ ವಾತಾವರಣವೂ ಪ್ರೇರಣೆಯಾಗಿತ್ತು. ಬಾಲ್ಯದಲ್ಲಿಯೇ ಆಟಿಕೆ ಪಿಸ್ತೂಲ್ಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಅವರು, ಸಿನಿಮಾಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ತಂದೆ ಗ್ರೆಗರಿ ಅವರಿಗೆ ಸಿನಿಮಾಗಳ ಮೇಲೆ ಆಸಕ್ತಿ ಇದ್ದುದರಿಂದ ಮನೆಯಲ್ಲಿ ಕ್ಯಾಸೆಟ್ಗಳ ಮೂಲಕ ಚಿತ್ರಗಳನ್ನು ವೀಕ್ಷಿಸುವ ವಾತಾವರಣವಿತ್ತು. ಇದರಿಂದ ಚೇತನ್ ಅವರಲ್ಲಿಯೂ ಸಿನಿಮಾದ ಬಗ್ಗೆ ಆಸಕ್ತಿ ಹೆಚ್ಚಾಯಿತು. ಕಾಲೇಜು ದಿನಗಳಲ್ಲಿಯೇ ಸಣ್ಣ ಸಣ್ಣ ಕಿರುಚಿತ್ರಗಳನ್ನು ನಿರ್ಮಿಸುವ ಮೂಲಕ ತಮ್ಮ ಆಸಕ್ತಿಗೆ ರೂಪ ನೀಡತೊಡಗಿದರು.
“ಚಿಕ್ಕಂದಿನಿಂದಲೇ ಚೇತನ್ಗೆ ಕರಾಟೆ ಬಗ್ಗೆ ಆಸಕ್ತಿ ಇತ್ತು. ಬ್ಲ್ಯಾಕ್ ಬೆಲ್ಟ್ ಕೂಡ ಪಡೆದಿದ್ದಾನೆ. ಕಾಲೇಜು ಮುಗಿಸಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಕ್ಕೆ ಸೇರಿದರೂ, ಫಿಲ್ಮ್ ಸ್ಟಂಟ್ಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ. ಇಂದು ಅದನ್ನೇ ವೃತ್ತಿಯನ್ನಾಗಿಸಿಕೊಂಡು ಸಾಧನೆ ಮಾಡಿರುವುದು ನಮಗೆ ಬಹಳ ಸಂತಸ ತಂದಿದೆ. ನಮ್ಮ ಸಂತೋಷವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ” ಎಂದು ತಂದೆ ಆಂಡ್ರಿವ್ ಗ್ರೆಗರಿ ಅಭಿಮಾನದಿಂದ ಹೇಳುತ್ತಾರೆ.
ಸ್ಟಾರ್ ಸಮಯದೊಂದಿಗೆ ಮಾತನಾಡಿರುವ ಚೇತನ್ ತಾಯಿ ಸ್ಟೆಲ್ಲಾ ಐಡಾ ಗಿಬ್ಬಾ ಡಿಸೋಜಾ ಮಗನ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಚೇತನ್ ಗೆ ಸಿನಿಮಾದಲ್ಲಿ ಬರುವ ಸ್ಟಂಟ್ ಪಾತ್ರಗಳೆಂದರೆ ಬಾಲ್ಯದಿಂದಲೂ ಆಸಕ್ತಿ. ಸಣ್ಣವನಿದ್ದಾಗ ಆಟಿಕೆ ಪಿಸ್ತೂಲ್ ಗೆ ಹಠ ಹಿಡಿದು ಪಡೆದುಕೊಳ್ಳುತ್ತಿದ್ದ. ಸಿನಿಮಾ ಮತ್ತು ಸಾಹಸ ಕಲೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಚೇತನ್, ಕಾಲೇಜು ಹಂತದಲ್ಲಿಯೇ ಕಿರುಚಿತ್ರಗಳ ಮೂಲಕ ಪ್ರಯೋಗಗಳನ್ನು ನಡೆಸುತ್ತಿದ್ದರು. ಇಂದು ಅದೇ ಆಸಕ್ತಿಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ ಎಂಬುದು ಅವರ ಅಭಿಪ್ರಾಯ.
ಸ್ಥಿರವಾದ ಐಟಿ ಉದ್ಯೋಗವನ್ನು ತೊರೆದು ಸಿನಿಮಾ ಕ್ಷೇತ್ರವನ್ನು ವೃತ್ತಿಯಾಗಿ ಸ್ವೀಕರಿಸುವುದು ಸುಲಭದ ನಿರ್ಧಾರವಾಗಿರಲಿಲ್ಲ. ಆದರೆ, ತಮ್ಮ ಕನಸಿನ ಮೇಲಿನ ನಂಬಿಕೆ ಮತ್ತು ಪರಿಶ್ರಮದಿಂದ ಚೇತನ್ ಸಾಹಸ ನಿರ್ದೇಶನದ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯತೊಡಗಿದರು. ಕನ್ನಡ ಚಿತ್ರರಂಗದ ಮೂಲಕ ವೃತ್ತಿಜೀವನ ಆರಂಭಿಸಿದ ಅವರು, ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ನಟರ ಚಿತ್ರಗಳಿಗೆ ಸಾಹಸ ದೃಶ್ಯಗಳ ಸಂಯೋಜನೆಯಲ್ಲಿ ತೊಡಗಿಸಿಕೊಂಡು ಅನುಭವ ಗಳಿಸಿದರು.
ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ‘ಜೈಲರ್ 2’ ಚಿತ್ರದಲ್ಲಿ ಅವಕಾಶ ದೊರೆತಿರುವುದು ಅವರ ವೃತ್ತಿಜೀವನದ ಪ್ರಮುಖ ಮೈಲಿಗಲ್ಲಾಗಿದೆ. ಚಿತ್ರದ ಅನೌನ್ಸ್ಮೆಂಟ್ ಟೀಸರ್ನ ಆಕ್ಷನ್ ಡಿಸೈನ್ ಕೆಲಸದ ಮೂಲಕ ಗಮನ ಸೆಳೆದ ಚೇತನ್, ಬಳಿಕ ಚಿತ್ರದ ಸಾಹಸ ನಿರ್ದೇಶನದ ಜವಾಬ್ದಾರಿಯನ್ನೂ ನಿರ್ವಹಿಸುವ ಅವಕಾಶ ಪಡೆದಿದ್ದಾರೆ ಎನ್ನಲಾಗಿದೆ.
ಆಧುನಿಕ ಚಿತ್ರಗಳಲ್ಲಿ ಸಾಹಸ ದೃಶ್ಯಗಳ ನಿರ್ಮಾಣಕ್ಕೆ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ನೈಜತೆಯ ಅನುಭವ ನೀಡುವ ಸಾಹಸ ಸನ್ನಿವೇಶಗಳನ್ನು ರೂಪಿಸುವುದು ಆಕ್ಷನ್ ನಿರ್ದೇಶಕರಿಗೆ ದೊಡ್ಡ ಸವಾಲಾಗಿದೆ. ಇಂತಹ ಕ್ಷೇತ್ರದಲ್ಲಿ ತಮ್ಮ ಕಲ್ಪನೆ ಮತ್ತು ತಾಂತ್ರಿಕ ಕೌಶಲದ ಮೂಲಕ ಗುರುತಿಸಿಕೊಳ್ಳುತ್ತಿರುವ ಚೇತನ್ ಅವರ ಕೆಲಸದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.
‘ಜೈಲರ್ 2’ ಮಾತ್ರವಲ್ಲದೆ, ತಮಿಳು ನಟ ಸೂರ್ಯ ಅಭಿನಯದ ‘ಸೀನ್’ ಚಿತ್ರಕ್ಕೂ ಚೇತನ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಅವಕಾಶ ಅವರ ವೃತ್ತಿಪರ ಪಯಣಕ್ಕೆ ಮತ್ತಷ್ಟು ಬಲ ನೀಡುವ ನಿರೀಕ್ಷೆಯಿದೆ.
ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದು, ಇಂಜಿನಿಯರಿಂಗ್ ಉದ್ಯೋಗವನ್ನು ತೊರೆದು ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಚೇತನ್ ಡಿಸೋಜಾ ಅವರ ಪಯಣ ಯುವಜನತೆಗೆ ಪ್ರೇರಣೆಯಾಗಿದೆ.

