-->
ಬೋಟ್‌ನ ಮೀನು ಸಂಗ್ರಹ ಸ್ಥಳದಲ್ಲಿ ಉಸಿರುಗಟ್ಟಿ ಮೂವರು ಸಾವು: ಗೋಕರ್ಣ ತದಡಿ ಬಂದರಿನಲ್ಲಿ ದುರಂತ

ಬೋಟ್‌ನ ಮೀನು ಸಂಗ್ರಹ ಸ್ಥಳದಲ್ಲಿ ಉಸಿರುಗಟ್ಟಿ ಮೂವರು ಸಾವು: ಗೋಕರ್ಣ ತದಡಿ ಬಂದರಿನಲ್ಲಿ ದುರಂತ


ಮೀನುಗಾರಿಕೆ ಮುಗಿಸಿ ಬಂದರಿಗೆ ಮರಳಿದ್ದ ಮೀನುಗಾರರು ಬೋಟ್‌ನಲ್ಲಿನ ಮೀನು ಸಂಗ್ರಹದ ಸ್ಥಳವನ್ನು ಸ್ವಚ್ಛಗೊಳಿಸುವ ವೇಳೆ ಉಸಿರಾಟದ ತೊಂದರೆಯಿಂದ ಮೂವರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥಗೊಂಡ ಘಟನೆ ಗೋಕರ್ಣದ ತದಡಿ ಬಂದರಿನಲ್ಲಿ ನಡೆದಿದೆ. ಅಸ್ವಸ್ಥರ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.


ಮೃತರನ್ನು ನೌಶಾದ್ (48), ಅಮೀನ್ (40) ಹಾಗೂ ಅಮನ್ (26) ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ಅಬ್ದುಲ್ ಯಾಕುಬ್ ದಾಡಿಯಾ (60) ಅವರನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೀನುಗಾರರು ತದಡಿ ಬಂದರಿನ ಕುಚೈಮಾ ಬೋಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೀನುಗಾರಿಕೆ ಮುಗಿಸಿ ಚಮನ್ ಮೀನುಗಳೊಂದಿಗೆ ಬಂದರಿಗೆ ಮರಳಿದ್ದ ಅವರು, ಬೋಟ್‌ನಲ್ಲಿದ್ದ ಮೀನುಗಳನ್ನು ಸಂಗ್ರಹದ ಸ್ಥಳದಿಂದ ಖಾಲಿ ಮಾಡಿದ ಬಳಿಕ ಆ ಭಾಗವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು. ಈ ವೇಳೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಅವಘಡ ಸಂಭವಿಸಿದೆ ಎನ್ನಲಾಗಿದೆ.

ಬೋಟ್‌ನಲ್ಲಿ ಮೀನುಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ದುರ್ನಾತ ಅಥವಾ ವಿಷಕಾರಿ ಅನಿಲ ಉತ್ಪತ್ತಿಯಾಗಿರುವ ಸಾಧ್ಯತೆಯಿದ್ದು, ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ, ಸಾವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ.

ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article