ಯುವತಿ ಮನೆಯವರ ಕಿರುಕುಳದಿಂದ ಪ್ರದೀಪ್ ಪೂಜಾರಿ ಆತ್ಮಹತ್ಯೆ : 10ಕ್ಕೂ ಹೆಚ್ಚು ಮಂದಿಯ ವಿರುದ್ದ ಎಫ್ಐಆರ್
ಪ್ರೀತಿಸುತ್ತಿದ್ದ ಯುವತಿಯ ಮನೆಯವರಿಂದ ಹಲ್ಲೆ ಹಾಗೂ ಬೆದರಿಕೆಗೆ ಒಳಗಾಗಿದ್ದ ಯುವಕ ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಹಾಗೂ ಇತರರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಡೂರು ನಿವಾಸಿ ದಿಲೀಪ್ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಪ್ರದೀಪ್ ಕಳೆದ ಎಂಟು ವರ್ಷಗಳಿಂದ ಶ್ರಾವ್ಯ ಶೆಟ್ಟಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಅ.27ರಂದು ರಾತ್ರಿ 10 ಗಂಟೆ ಸುಮಾರಿಗೆ ನಾಯರ್‌ಕೋಡಿನಲ್ಲಿರುವ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಮೂರು ಕಾರುಗಳಲ್ಲಿ ಬಂದ ಶ್ರಾವ್ಯ ಶೆಟ್ಟಿಯ ಸಹೋದರರಾದ ಪ್ರಸನ್ನ ಶೆಟ್ಟಿ, ಸುಧೀರ್ ಶೆಟ್ಟಿ, ಶೈಲೇಶ್ ಶೆಟ್ಟಿ ಸೇರಿದಂತೆ ಸನತ್, ಕೃಷ್ಣ, ಸುಜಯ್ ಹಾಗೂ ಇತರರು ಆತನನ್ನು ಶ್ರಾವ್ಯ ಶೆಟ್ಟಿಯ ಮನೆಗೆ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲಿ ಪ್ರಸನ್ನ ಶೆಟ್ಟಿ ಬೆತ್ತದಿಂದ ಪ್ರದೀಪನ ಕಾಲು ಹಾಗೂ ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ನಡೆಸಿದ್ದು, ಇತರರು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಷಯ ತಿಳಿದ ಪ್ರದೀಪನ ಸಹೋದರ ದಿಲೀಪ್ ಕುಮಾರ್, ಸ್ನೇಹಿತರನ್ನು ಆತನನ್ನು ವಿಚಾರಿಸಿಕೊಂಡು ಬರಲು ಕಳುಹಿಸಿದ್ದರು. ಸ್ನೇಹಿತರು ಶ್ರಾವ್ಯ ಶೆಟ್ಟಿಯ ಮನೆಗೆ ತೆರಳಿದಾಗ ಆರೋಪಿತರು ಪ್ರದೀಪನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸುತ್ತಿದ್ದರು. ಸ್ನೇಹಿತರನ್ನು ಕಂಡ ಬಳಿಕ ಹಲ್ಲೆ ನಿಲ್ಲಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅ.28ರಂದು ಪ್ರದೀಪ್ ಚಿಕಿತ್ಸೆಗಾಗಿ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದ. ಈ ವೇಳೆ ಸಹೋದರ ಆಸ್ಪತ್ರೆಗೆ ಭೇಟಿ ನೀಡಿದಾಗ, ಹಿಂದಿನ ದಿನ ನಡೆದ ಹಲ್ಲೆಯ ಘಟನೆಯನ್ನು ಪ್ರದೀಪ್ ವಿವರಿಸಿದ್ದ. ಅಲ್ಲದೆ, ಶ್ರಾವ್ಯ ಶೆಟ್ಟಿ ಹಾಗೂ ಆಕೆಯ ಸಹೋದರರು ಬೆದರಿಕೆ ಹಾಕಿರುವ ಬಗ್ಗೆಯೂ ತಿಳಿಸಿ ತೀವ್ರ ದುಃಖ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಇದೇ ವಿಚಾರದಿಂದ ಮನನೊಂದ ಪ್ರದೀಪ್, ಅ.30ರಂದು ಸಂಜೆ 5.30ರ ಸುಮಾರಿಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಕುತ್ತಿಗೆಗೆ ಬಿಳಿ ಬಣ್ಣದ ಟ್ಯಾಗ್ ಸುತ್ತಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪ್ರದೀಪನ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ ಶ್ರಾವ್ಯ ಶೆಟ್ಟಿ, ಪ್ರಸನ್ನ ಶೆಟ್ಟಿ, ಸುಧೀರ್, ಶೈಲೇಶ್, ಶಶಾಂಕ್, ಕೃಷ್ಣ, ಸುಜಯ್, ಸನತ್, ಹೊರರಾಜ್ಯದ ಇಬ್ಬರು ಕಾರ್ಮಿಕರು ಹಾಗೂ ಇತರರ ವಿರುದ್ಧ ದಿಲೀಪ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.