ನಾರಿ ಶಕ್ತಿಯ ಪ್ರತೀಕ ವೀರ ವನಿತೆ ಒನಕೆ ಓಬವ್ವ: ದಿನಕರ ಹೇರೂರು
ವೀರ ವನಿತೆ ಒನಕೆ ಓಬವ್ವ ಅವರ ಹೆಸರು ಕೇಳಿದಾಗ ಪ್ರತಿಯೊಬ್ಬರಲ್ಲೂ ರೋಮಾಂಚನ ಮೂಡುತ್ತದೆ. ಧೈರ್ಯ, ಸಾಹಸ ಹಾಗೂ ಸಮಯಪ್ರಜ್ಞೆಯಿಂದ ಶತ್ರುಗಳ ದಾಳಿಯಿಂದ ಚಿತ್ರದುರ್ಗ ಕೋಟೆಯನ್ನು ರಕ್ಷಿಸಿದ ಅವರು ನಾರಿಶಕ್ತಿಯ ಪ್ರತೀಕವಾಗಿ ಮಹಿಳೆಯರಿಗೆ ಇಂದಿಗೂ ಪ್ರೇರಣೆಯಾಗಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು
ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಓಬವ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಸಮೃದ್ಧ ನಾಡಿನ ನಿರ್ಮಾಣದಲ್ಲಿ ಅನೇಕ ಮಹನೀಯರು ಹಾಗೂ ಮಹಿಳೆಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅಂತಹ ವೀರ ಮಹಿಳೆಯರಲ್ಲಿ ಒನಕೆ ಓಬವ್ವ ಕೂಡ ಪ್ರಮುಖರು. ಅವರ ಸಾಹಸಗಾಥೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಅವರ ಆದರ್ಶಗಳನ್ನು ಅನುಸರಿಸಲು ಪ್ರೇರೇಪಿಸುವ ಉದ್ದೇಶದಿಂದ ಸರಕಾರ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುತ್ತಿದೆ ಎಂದರು.
ಹೈದರಾಲಿಯ ಸೈನ್ಯ ಚಿತ್ರದುರ್ಗ ಕೋಟೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ರಹಸ್ಯ ಕಿಂಡಿಯ ಮೂಲಕ ಕೋಟೆಯೊಳಗೆ ನುಸುಳಲು ಯತ್ನಿಸುತ್ತಿದ್ದ ಶತ್ರು ಸೈನಿಕರನ್ನು ಗಮನಿಸಿದ ಓಬವ್ವ, ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಒಬ್ಬೊಬ್ಬರಾಗಿ ಸದೆಬಡಿದು ಕೋಟೆಯನ್ನು ರಕ್ಷಿಸಿದ್ದರು. ಅವರಂತೆ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಅನೇಕ ವೀರ ಮಹಿಳೆಯರು ದೇಶ ಮತ್ತು ನಾಡಿನ ರಕ್ಷಣೆಗಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರ ತ್ಯಾಗ, ಸಾಹಸ ಹಾಗೂ ಕೆಚ್ಚೆದೆಯ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಹೆಣ್ಣುಮಕ್ಕಳು ಆತ್ಮರಕ್ಷಣೆಯ ಜತೆಗೆ ದೇಶದ ರಕ್ಷಣೆಯನ್ನೂ ಮಾಡಬಲ್ಲರು ಎಂಬುದಕ್ಕೆ ಒನಕೆ ಓಬವ್ವ ಸೇರಿದಂತೆ ಅನೇಕ ವೀರ ಮಹಿಳೆಯರ ಜೀವನಗಾಥೆಗಳೇ ಸಾಕ್ಷಿ. ಅವರ ಸಮರ್ಪಣಾ ಮನೋಭಾವ ಎಲ್ಲರಿಗೂ ಮಾದರಿಯಾಗಬೇಕು. ಪೋಷಕರು ತಮ್ಮ ಮಕ್ಕಳಿಗೆ ದೈಹಿಕ ಕಸರತ್ತು ಹಾಗೂ ಆತ್ಮರಕ್ಷಣೆಯ ಕೌಶಲಗಳನ್ನು ಕಲಿಸಬೇಕು ಎಂದರು.
ಒನಕೆ ಓಬವ್ವ ಅವರ ಕುರಿತು ಉಪನ್ಯಾಸ ನೀಡಿದ ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾದೇವಿ ಎಂ.ಆರ್. ಮಾತನಾಡಿ, 18ನೇ ಶತಮಾನದಲ್ಲಿ ಚಿತ್ರದುರ್ಗದ ಕೋಟೆಯನ್ನು ಆಳುತ್ತಿದ್ದ ಪಾಳೆಯಗಾರ ಮದಕರಿ ನಾಯಕನ ಅರಮನೆಯ ಕಾವಲುಗಾರನ ಪತ್ನಿಯಾಗಿದ್ದ ಓಬವ್ವ, ಮನೆವಾರ್ತೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ನಾಡಿನ ರಕ್ಷಣೆಯ ಕಿಚ್ಚು ಹೊಂದಿದ್ದರು. ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ, ಊಟ ಮಾಡುತ್ತಿದ್ದ ಪತಿಯನ್ನು ಎಬ್ಬಿಸದೆ, ಕೇವಲ ಒನಕೆಯನ್ನೇ ಆಯುಧವನ್ನಾಗಿಸಿಕೊಂಡು ಶತ್ರು ಸೈನಿಕರನ್ನು ಸದೆಬಡಿದ ಧೀರ ಮಹಿಳೆ ಅವರು. ಅವರ ಅಪ್ರತಿಮ ಸಾಹಸ, ಧೈರ್ಯ ಮತ್ತು ಸಮಯಪ್ರಜ್ಞೆ ಸ್ತ್ರೀಶಕ್ತಿಯ ಪ್ರತೀಕವಾಗಿದ್ದು, ಆ ತೇಜಸ್ಸು ಪ್ರತಿಯೊಬ್ಬರಲ್ಲೂ ಉದ್ದೀಪನಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಉಪತಹಶೀಲ್ದಾರ್ ನವನೀತ್, ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇಲಾಖೆಯ ಸಿಬ್ಬಂದಿ ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.