ಆಸ್ತಿ ಕಬಳಿಸಲು ಅಣ್ಣಂದಿರಿಂದ ಕಿರುಕುಳ ಆರೋಪ: ನ್ಯಾಯ ಕೊಡಿಸಲು ಡಯಾನಾ ಲೂವಿಸ್ ಮನವಿ
Friday, November 27, 2026
ಮೂಲತಃ ಕುಂದಾಪುರದ ತ್ರಾಸಿ ನಿವಾಸಿ, ಲಂಡನ್ ನಲ್ಲಿ ನೆಲೆಸಿರುವ ಡಯಾನಾ ಲೂವಿಸ್ ತನ್ನೂರಿಗೆ ಭೇಟಿ ನೀಡಿದ ವೇಳೆ ಅಣ್ಣಂದಿರಾದ ಅಲೆಕ್ಸಾಂಡರ್ ಲೂವಿಸ್ ಹಾಗೂ ಜೋಸೆಫ್ ಲೂವಿಸ್ ಅವರು ಚೂರಿಯಿಂದ ಹಲ್ಲೆಗೈದು ತನ್ನ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಡಯಾನಾ ಲೂವಿಸ್ ಆರೋಪಿಸಿದ್ದಾರೆ
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ವಿದೇಶದಲ್ಲಿ ನೆಲೆಸಿರುವ ಸಂದರ್ಭದಲ್ಲಿ ತ್ರಾಸಿಯಲ್ಲಿರುವ ತನ್ನ ಮನೆಯ ಡುಪ್ಲಿಕೇಟ್ ಕೀ ಬಳಸಿ ಅಣ್ಣಂದಿರು ಮನೆಯೊಳಗೆ ಪ್ರವೇಶಿಸಿ ಮದ್ಯಪಾನ ಮಾಡಿ ಮೋಜುಮಸ್ತಿ ಮಾಡುತ್ತಿದ್ದರು. ಅಲ್ಲದೆ, ತನ್ನ ವೃದ್ಧ ತಂದೆ-ತಾಯಿಯ ಆರೈಕೆಗಾಗಿ ಕಳುಹಿಸುತ್ತಿದ್ದ ಹಣವನ್ನೂ ದುರುಪಯೋಗಪಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದರು.
ಕಳೆದ 30 ವರ್ಷಗಳಿಂದ ತನ್ನ ಸ್ವಂತ ಖರ್ಚಿನಲ್ಲಿ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದೇನೆ. ಆದರೆ ಇದೀಗ ಅಣ್ಣಂದಿರು ಬಲವಂತವಾಗಿ ತಂದೆ-ತಾಯಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. ತನಗೆ ಮಾನಸಿಕ ಅಸ್ವಸ್ಥೆ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ತನ್ನ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ದೂರಿದರು.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಪೊಲೀಸರಿಂದ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತನ್ನ ವೃದ್ಧ ತಂದೆ-ತಾಯಿಯನ್ನು ಮತ್ತೆ ತನ್ನೊಂದಿಗೆ ಕಳುಹಿಸಿಕೊಡಬೇಕು. ಅಲ್ಲದೆ, ಅಣ್ಣಂದಿರು ತನ್ನಿಂದ ಪಡೆದಿರುವ ಲಕ್ಷಾಂತರ ರೂಪಾಯಿ ಹಣವನ್ನು ಹಿಂದಿರುಗಿಸಬೇಕು ಎಂದು ಅವರು ಒತ್ತಾಯಿಸಿದರು.
.jpeg)