ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ: ಯಶಪಾಲ್ ಸುವರ್ಣ
ಜಾತಿ, ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವಂತೆ ಸುಲಭ ಭಾಷೆಯಲ್ಲಿ ತಿಳಿಸಿದ ಕನಕದಾಸರು ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಉಡುಪಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಉಡುಪಿಗೂ ಕನಕದಾಸರಿಗೂ ಅವಿನಾಭಾವ ಸಂಬಂಧ ಇದೆ. ಕನಕದಾಸರ ಭಕ್ತಿಗೆ ಶ್ರೀಕೃಷ್ಣ ಒಲಿದು ದರ್ಶನ ನೀಡಿರುವುದು ಇಂದಿಗೂ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿದಿರುವ ವಿಚಾರವಾಗಿದೆ. ಉಡುಪಿಗೆ ಆಗಮಿಸುವ ಭಕ್ತರು ಕನಕನ ಕಿಂಡಿಯ ಮೂಲಕವೇ ಶ್ರೀಕೃಷ್ಣನ ದರ್ಶನ ಪಡೆಯುವುದನ್ನು ಕಾಣಬಹುದಾಗಿದೆ. ಇದು ಕನಕ ದಾಸರ ಭಕ್ತಿಯ ಪ್ರತೀಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಬದುಕು ಉತ್ತಮವಾಗಲು ಮನಸ್ಸಿನಲ್ಲಿರುವ ದ್ವೇಷ, ಅಸೂಯೆಗಳನ್ನು ಹೋಗಲಾಡಿಸಿ ಸುಂದರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು. ದಾಸ ಸಾಹಿತ್ಯದ ಮೂಲಕ ಸಮಾಜಕ್ಕೆ ಅನೇಕ ಮಹನೀಯರು ಸಂದೇಶ ನೀಡಿದ್ದು, ಅದನ್ನು ನಾವು ಪಾಲಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಕನಕದಾಸರು ಬದುಕು ರೂಪಿಸಲು ಬೇಕಾದ ಆದರ್ಶಗಳನ್ನು ತಮ್ಮ ಕೀರ್ತನೆಗಳ ಮೂಲಕ ಅರ್ಥಬದ್ದವಾಗಿ ತಿಳಿಸಿಕೊಟ್ಟಿದ್ದಾರೆ ಎಂದರು.
ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಉಪನ್ಯಾಸ ನೀಡಿ, ಜೀವನದಲ್ಲಿ ಸದಾ ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದು ಕನಕದಾಸರ ಚಿಂತನೆ. ಸಮಾಜದಲ್ಲಿ ಎಲ್ಲರೂ ಸಮಾನರು. ಮಾನವೀಯತೆ ಅತೀ ಮುಖ್ಯ ಎಂಬುದನ್ನು ತಿಳಿಸಿಕೊಟ್ಟ ಕನಕದಾಸರು, ನಾವು ಮಾಡುವ ಕೆಲಸ ಮತ್ತು ಭಗವಂತನಲ್ಲಿ ಅಚಲ ನಂಬಿಕೆ, ವಿಶ್ವಾಸ ಹೊಂದಿದಾಗ ಯಶಸ್ಸುಗಳಿಸಲು ಸಾಧ್ಯ ಎಂಬ ಸಂದೇಶ ಸಾರಿದರು. ಆದರಂತೆ ನಾವು ಎಂದಿಗೂ ಬದುಕಿನ ಮೇಲಿನ ಭರವಸೆಯನ್ನು ಕಳೆದುಕೊಳ್ಳಬಾರದು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಉಡುಪಿ ಜಿಲ್ಲಾ ಕನಕದಾಸ ಸಮಾಜ ಸೇವಾ ಸಂಘದ ಅಧ್ಯಕ್ಷ ಹನುಮಂತ ಡೊಳ್ಳಿನ, ಬೆಂಗಳೂರರಿನಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಕಾರ್ಯದರ್ಶಿ ಬಸವರಾಜ ಕುರುಬರ, ಉಡುಪಿ ಜಿಲ್ಲಾ ಹಾಲುಮತ ಮಹಾಸಭಾ ಅಧ್ಯಕ್ಷ ವೀರೇಶ್ ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಆಕಾಶವಾಣಿ ಉದ್ಯೋಷಕ ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿ, ವಂದಿಸಿದರು.