Bhatkal: ಮೀನುಗಾರಿಕಾ ದೋಣಿ ದುರಂತ; ಮಾಜಿ ಶಾಸಕ ಸುನಿಲ್ ನಾಯ್ಕ್ ಭೇಟಿ (Video)
31/07/2025
ಮೀನುಗಾರಿಕಾ ದೋಣಿ ಮುಳುಗಿ ನಾಲ್ಕು ಮಂದಿ ಮೀನುಗಾರರು ನಾಪತ್ತೆಯಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ ಬಂದರಿನ ಅಳಿವೆ ಬಾಗಿಲು ಪ್ರದೇಶಕ್ಕೆ ಮಾಜಿ ಶಾಸಕ ಸುನಿಲ್ ನಾಯ್ಕ್ ಭೇಟಿ ನೀಡಿದರು.
ಸಂದರ್ಭ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡ ಸುನಿಲ್ ನಾಯ್ಕ್, ಪೋನ್ ಮೂಲಕ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಸಂಪರ್ಕಿಸಿ, ಕಾಣೆಯಾದವರ ಶೋಧ ಕಾರ್ಯಾಚರಣೆಗೆ ಕರಾವಳಿ ಕಾವಲು ಪಡೆಯ ಬೋಟ್ ಗಳನ್ನು ಕಳುಹಿಸುವಂತೆ ವಿನಂತಿಸಿದರು.
ಪದೇ ಪದೇ ಮೀನುಗಾರಿಕಾ ದೋಣಿ ದುರಂತಕ್ಕೀಡಾಗುತ್ತಿದ್ದು, ಸಂಬಂಧಪಟ್ಟ ಇಲಾಖೆಯು ಮೀನುಗಾರರಿಗೆ ಅತ್ಯಾಧುನಿಕ ಲೈಫ್ ಜಾಕೆಟ್ಗಳನ್ನು ಒದಗಿಸಿ, ಮೀನುಗಾರಿಕೆಗೆ ಇಳಿಯುವ ಸಂದರ್ಭದಲ್ಲಿ ಖಡಾಖಂಡಿತವಾಗಿ ಅದನ್ನು ಧರಿಸುವಂತೆ ಕಠಿಣ ಕಾನೂನನ್ನು ಜರುಗಿಸಬೇಕಿದೆ. ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ಜುಲೈ 30ರಂದು ಭಟ್ಕಳ ತಾಲೂಕಿನ ತೆಂಗಿನಗುಂಡಿ ಬಂದರಿನ ಅಳಿವೆ ಬಾಗಿಲಲ್ಲಿ ಸಂಭವಿಸಿದ ದೋಣಿ ದುರುಂತದಲ್ಲಿ ನಾಲ್ವರು ಮೀನುಗಾರರು ನಾಪತ್ತೆಯಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೀನುಗಾರಿಕೆಗೆ ತೆರಳುವಾಗ ಅಳಿವೆಯಲ್ಲಿ ದೋಣಿಯ ಮೇಲೆ ಬ್ರಹತ್ ಗಾತ್ರದ ಕಡಲು ಮುರಿದ ಪರಿಣಾಮ ಈ ದುರಂತ ಸಂಭವಿಸಿತ್ತು.
ರಾಮಕೃಷ್ಣ ಮಂಜು ಮೊಗೇರ ಜಾಲಿಕೋಡಿ, ಸತೀಶ್ ತಿಮ್ಮಪ್ಪ ಮೊಗೆರ ಅಳ್ವೆಕೋಡಿ, ಗಣೇಶ್ ಮಂಜುನಾಥ್ ಮೊಗೇರ ಅಳ್ವೆಕೋಡಿ ಹಾಗೂ ನಿಶ್ಚಿತ ನಾಪತ್ತೆಯಾಗಿದ್ದು, ಅವರ ಸುಳಿವು ಇನ್ನೂ ಸಿಕ್ಕಿಲ್ಲ.