
Udupi: ಆ. 2 ರಂದು ಲಯನ್ಸ್ 317 ಸಿಯ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಪದಗ್ರಹಣ ಸಮಾರಂಭ
ಲಯನ್ಸ್ ಜಿಲ್ಲೆ 317 ಸಿಯ ನೂತನ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಹಾಗೂ ಅವರ ಸಂಪುಟ ಪದಗ್ರಹಣ ಸಮಾರಂಭವು ಆ. 2 ರಂದು ಅಪರಾಹ್ನ ಉಡುಪಿ ಕಲ್ಸಂಕದ ಟೈಮ್ ಸ್ಕ್ವಾರ್ ಮಾಲ್ ನ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಚಿನ್ನಾರಿ ಮುತ್ತು ಖ್ಯಾತಿಯ ಚಿತ್ರ ನಟ ವಿಜಯ ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಲಯನ್ಸ್ ಇಂಟರ್ ನ್ಯಾಷನಲ್ ಮಾಜಿ ಅಂತರ ರಾಷ್ಟ್ರೀಯ ನಿರ್ದೇಶಕ ಆರ್. ಸಂಪತ್ ಅವರು ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಲಿರುವರು.
ಇನ್ನೋರ್ವ ಮಾಜಿ ಅಂತರ ರಾಷ್ಟ್ರೀಯ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ ಹಾಗೂ ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ಎನ್. ಮೋಹನ್ ಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಥಮ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ಹರಿಪ್ರಸಾದ್ ರೈ, ನಿಕಟಪೂರ್ವ ಮಾಜಿ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್, ಲಯನ್ಸ್ ಜಿಲ್ಲಾ ಸಂಪುಟ ಕಾರ್ಯದರ್ಶಿ ಶಾಲಿನಿ ಬಂಗೇರ, ಜಿಲ್ಲಾ ಸಂಪುಟ ಕೋಶಾಧಿಕಾರಿ ಶಶಿಧರ್ ಶೆಟ್ಟಿ, ಲಿಯೋ ಕ್ಲಬ್ ಜಿಲ್ಲಾಧ್ಯಕ್ಷ ಚಿರಾಗ್ ಪೂಜಾರಿ ಅವರು ಉಪಸ್ಥಿತರಿದ್ದಾರೆ.
ಸಪ್ನಾ ಸುರೇಶ್ ಅವರು ಲಯನ್ಸ್ ಜಿಲ್ಲೆಯ ಪ್ರಥಮ ಮಹಿಳಾ ಗವರ್ನರ್ ಆಗಿ ಮೂಡಿ ಬಂದಿದ್ದು, ಅವರ ಪತಿ ಸುರೇಶ್ ಪ್ರಭು ಅವರೂ ಈ ಹಿಂದೆ ಲಯನ್ಸ್ ಜಿಲ್ಲಾ ಗವರ್ನರ್ ಆಗಿ ಕಾರ್ಯನಿರ್ವಹಿಸಿರುವುದು ವಿಶೇಷವಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ನಡೆಸಲಾಗುವುದು. ಉಡುಪಿ, ದಾವಣಗೆರೆ, ಶಿವಮೊಗ್ಗೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಂದ ಸುಮಾರು 1000 ಲಯನ್ಸ್ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಲಯನ್ಸ್ ಜಿಲ್ಲಾ ಸಂಪುಟ ಪದಗ್ರಹಣ ಸಮಿತಿ ಅಧ್ಯಕ್ಷ ಪದ್ಮನಾಭ ಭಂಡಾರಿ, ಕಾರ್ಯದರ್ಶಿ ಸಿದ್ದರಾಜು, ಕೋಶಾಧಿಕಾರಿ ರಾಧಾಕೃಷ್ಣ ಮೆಂಡನ್ ಅವರನ್ನೊಳಗೊಂಡ ಸಮಿತಿ ಪದಗ್ರಹಣ ಕಾರ್ಯಕ್ರಮದ ಯಶಸ್ಸಿಗೆ ಸರ್ವ ಸಿದ್ಧತೆಗಳನ್ನು ನಡೆಸಿದ್ದು, ಲಯನ್ಸ್ ಕ್ಲಬ್ ಪರ್ಕಳ ಕಾರ್ಯಕ್ರಮದ ಆತಿಥೇಯರಾಗಿದ್ದಾರೆ.