Baikampady: ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯ ಸೋರಿಕೆ; ನಾಲ್ವರು ಕಾರ್ಮಿಕರು ಗಂಭೀರ

Baikampady: ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯ ಸೋರಿಕೆ; ನಾಲ್ವರು ಕಾರ್ಮಿಕರು ಗಂಭೀರ


ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮೀನು ಸಂಸ್ಕರಣಾ ಘಟಕದಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ನಾಲ್ವರು ಕಾರ್ಮಿಕರು ತೀವ್ರ ಅಸ್ವಸ್ಥಗೊಂಡ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ನಾಲ್ವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಈ ಕಂಪೆನಿಯಲ್ಲಿ 200ಕ್ಕೂ ಅಧಿಕ ಕಾರ್ಮಿಕರಿದ್ದು, ಪಾಳಿಯಲ್ಲಿ ಕೆಲಸ ನಡೆಯುತ್ತಿತ್ತು. ಗುರುವಾರ ಸಂಜೆ 4.30ರ ಸುಮಾರಿಗೆ ಸ್ಥಾವರದ ಒಳಗಿರುವ ಅಮೋನಿಯಾ ಸಾಗಾಟ ಪೈಪ್ ಒಂದರಲ್ಲಿ ಸೋರಿಕೆ ಕಂಡುಬಂತು. ಘಟಕದ ಸಮೀಪ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸೋರಿಕೆಯಿಂದ ಉಸಿರುಗಟ್ಟಿದಂತಾಗಿ ಬೊಬ್ಬೆ ಹಾಕಿದ್ದಾರೆ. ತತ್‌ಕ್ಷಣ ಸೈರನ್ ಮೊಳಗಿಸಿ ಕಾರ್ಮಿಕರನ್ನು ಹೊರಗಡೆ ಕರೆದುಕೊಂಡು ಬಂದು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಅಸ್ವಸ್ಥರಾದವರನ್ನು ಕಂಪೆನಿಯ ಆಡಳಿತವು ತುರ್ತಾಗಿ ಚಿಕಿತ್ಸೆಗೆ ದಾಖಲಿಸಲು ಕ್ರಮ ಕೈಗೊಂಡಿತು. ಇವರಲ್ಲಿ ಉತ್ತರ ಭಾರತ ಮೂಲದ ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 


ಅಮೋನಿಯಾ ಸೋರಿಕೆ ನಿಯಂತ್ರಣಕ್ಕೆ ಸ್ಥಳೀಯ ಎಂಸಿಎಫ್ ಸಹಿತ ಅಗ್ನಿಶಾಮಕ ಪಡೆಯು ಧಾವಿಸಿ ಕಾರ್ಯಾಚರಣೆ ನಡೆಸಿತು. ಮಾಹಿತಿ ತಿಳಿಯುತ್ತಿದ್ದಂತೆ ಮಂಗಳೂರು ತಹಶೀಲ್ದಾರ್, ಉಪ ತಹಶೀಲ್ದಾರ್, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತುರ್ತು ಮಾಹಿತಿ ಪಡೆದುಕೊಂಡರು. ಅಮೋನಿಯ ಸೋರಿಕೆ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ಪರಿಶೀಲಿಸಿದರು. ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.


Ads on article

Advertise in articles 1

advertising articles 2

Advertise under the article