
Mangalore:ನಿರಂತರ ಮಳೆ ಹಿನ್ನೆಲೆ; ತಗ್ಗು ಪ್ರದೇಶ ಜಲಾವೃತ; ಅಲ್ಲಲ್ಲಿ ಗುಡ್ಡ ಕುಸಿತ
17/07/2025 06:24 AM
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಘಟನೆಯಿಂದ ರಸ್ತೆ ಸಂಚಾರಕ್ಕೆ ತೊಡಕಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆಲ ಮಂಗಳೂರು ನಗರದಲ್ಲಿ ಜುಲೈ 17ರಂದು ರಾತ್ರಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು, ನೀರು ನುಗ್ಗಿ ಅಲ್ಲಲ್ಲಿ ಅನಾಹುತ ಸೃಷ್ಟಿಯಾಗಿದೆ.
ನಗರದಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಕ್ಕೆ ದ.ಕ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಿಜೈ ಕೆಪಿಟಿ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದೆ. ಕೊಂಚಾರು ಎಂಎಸ್ ಇಝಡ್ ಕಾಲನಿ ಪ್ರದೇಶದಲ್ಲಿ ಭೂಕುಸಿತದಿಂದ ಆರು ಮನೆಗಳಿಗೆ ಹಾನಿಯಾಗಿದ್ದು, ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.
ಅದ್ಯಪಾಡಿ-ಕೈಕಂಬ ಸಂಪರ್ಕ ರಸ್ತೆಯ ಮೂಡುಕೆರೆ ಬಳಿ ಭೂಕುಸಿತ ಉಂಟಾಗಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಮೇರಿಹಿಲ್ ಬಳಿ ತಡೆಗೋಡೆ ಕುಸಿದು, ನಿಲ್ಲಿಸಿದ್ದ ಬೈಕ್‌ಗಳ ಮೇಲೆಯೇ ಬಿದ್ದಿದೆ.ಮಳೆ ಅನಾಹುತ ಆಗಿರುವ ಸ್ಥಳಗಳಿಗೆ ದ.ಕ ಜಿಲ್ಲಾಧಿಕಾರಿ ದರ್ಶನ್ ಅವರು ಭೇಟಿ ನೀಡಿ, ಬಟ್ಟಗುಡ್ಡ, ಆರ್ಯ ಸಮಾಜ ರಸ್ತೆ, ಪಂಪ್ವೆಲ್, ಮಾಲೆಮಾರ್, ಕಾವೂರು, ಉಲ್ಲಾಸ ನಗರ, ಕೊಟ್ಟಾರ ಚೌಕಿ ಮೊದಲಾದ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ.ಭಾರಿ ಮಳೆಯ ಹಿನ್ನೆಲೆಯಲ್ಲಿ ಜುಲೈ17ರಂದು ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆ, ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.