
Mangalore: ಮನಪಾ ಉದ್ದಿಮೆ ಪರವಾನಿಗೆ ನಕಲು; ಆರೋಪಿಯ ಬಂಧನ
ಮಂಗಳೂರು ಮಹಾನಗರಪಾಲಿಕೆಯ ಆಸ್ತಿ ತೆರಿಗೆ ರಶೀದಿ ಮತ್ತು ಟ್ರೆಡ್ ಲೈಸೆನ್ಸ್ ಸರ್ಟಿಫಿಕೇಟ್ ನ್ನು ನಕಲಿ ಮಾಡಿ ಉದ್ಯಮಿಗಳಿಗೆ ವಂಚಿಸುತ್ತಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮಂಗಳೂರಿನ ನಿವಾಸಿ ಪೃಥ್ವಿರಾಜ್ ಶೆಟ್ಟಿ ಯಾನೆ ಮುನ್ನ ಎಂದು ಗುರುತಿಸಲಾಗಿದೆ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್ ಎಂಬ ಉದ್ದಿಮೆ ಹೊಂದಿರುವ ಬಾಲಕೃಷ್ಣ ಸುವರ್ಣ ಎಂಬವರು ನ್ಯಾಯಾಲಯದ ಪ್ರಕರಣ ದಲ್ಲಿ ವ್ಯವಹರಿಸಲು ದಾಖಲಾತಿಗಳನ್ನು ಪಡೆದುಕೊಳ್ಳಲು ಮಂಗಳೂರು ಮಹಾ ನಗರ ಪಾಲಿಕೆಗೆ ಭೇಟಿ ನೀಡಿದ್ದರು. ಆ ವೇಳೆ ಅವರ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ಅನೂರ್ಜಿತಗೊಂಡಿರುವುದು ತಿಳಿದು ಬಂದಿದೆ . ಆದರೆ ಬಾಲಕೃಷ್ಣ ಸುವರ್ಣ ರವರಲ್ಲಿ ಊರ್ಜಿತವಾಗಿರುವ ಉದ್ದಿಮೆ ಪರವಾನಗಿ ಹಾಗೂ ಆಸ್ತಿ ತೆರಿಗೆ ಇದ್ದು, ಇದನ್ನು ಪರಿಶೀಲಿಸಿದಾಗ ಬಾಲಕೃಷ್ಣ ಸುವರ್ಣ ರವರಿಂದ ಪೃಥ್ವಿರಾಜ್ ಶೆಟ್ಟಿ ಎಂಬಾತ 27,990 ರೂಪಾಯಿ ಹಣವನ್ನು ಪಡೆದುಕೊಂಡು ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನಕಲಿಯಾಗಿ ಸೃಷ್ಠಿಸಿ ನೀಡಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಶ್ರೀ ಬಾಲಕೃಷ್ಣ ಸುವರ್ಣರವರು ನಕಲಿ ಉದ್ದಿಮೆ ಪರವಾನಿಗೆಯನ್ನು ಹಾಗೂ ಆಸ್ತಿ ತೆರಿಗೆಯನ್ನು ಸೃಷ್ಠಿಸಿ ವಂಚಿಸಿರುವ ಪೃಥ್ವಿರಾಜ್ ಶೆಟ್ಟಿ ವಿರುದ್ದ ದೂರು ನೀಡಿದ್ದಾರೆ.
ಇದೀಗ ಪೊಲೀಸರು ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಹಲವು ಉದ್ಯಮಿಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಿದೆ.