
Mangalore: ಉದ್ಯಮಿಗಳಿಗೆ ಬಹುಕೋಟಿ ವಂಚನೆ; ಆರೋಪಿ ಅರೆಸ್ಟ್;ವಿದೇಶೀ ಯುವತಿ ಪತ್ತೆ
18/07/2025 09:55 AM
ಶ್ರೀಮಂತ ಉದ್ಯಮಿಗಳಿಗೆ ಬಹುಕೋಟಿ ವಂಚಿಸಿರುವ ಆರೋಪಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಜಪ್ಪಿನಮೊಗರು ನಿವಾಸಿ ರೋಹನ್ ಸಲ್ದಾನ(45) ಬಂಧಿತ ಆರೋಪಿ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಮನೆಯಲ್ಲಿ ಮಲೇಶ್ಯಾ ಮೂಲದ ಯುವತಿ ಪತ್ತೆಯಾಗಿದ್ದಾಳೆ. ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, ಹೊರಜಿಲ್ಲೆಯ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿ ಜಾಗದ ವ್ಯವಹಾರದ ಜೊತೆಗೆ ಸಾಲ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ. ಈ ರೀತಿಯಾಗಿ ಆರೋಪಿ ಕೇವಲ 3 ತಿಂಗಳಲ್ಲೇ 45 ಕೋಟಿ ರೂ. ವ್ಯವಹಾರ ಮಾಡಿರುವುದು ಪತ್ತೆಯಾಗಿದೆ. ಕಳೆದ ಅನೇಕ ವರ್ಷಗಳಿಂದ 200 ಕೋಟಿ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಉದ್ಯಮಿ ಹಾಗೂ ಶ್ರೀಮಂತ ವ್ಯಕ್ತಿಗಳನ್ನು ತನ್ನ ಮೋಸದ ಬಲೆಗೆ ಬೀಳಿಸುತ್ತಿದ್ದ ಆರೋಪಿ ತನ್ನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ನಡೆಸುತ್ತಿದ್ದ. ಈತ 5ರಿಂದ 100 ಕೋಟಿ ರೂಪಾಯಿವರೆಗೆ ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಮನೆಯೂ ಐಶಾರಾಮಿಯಾಗಿದ್ದು, ಬೆಲೆಬಾಳುವ ಗಿಡಗಳು, ಐಷಾರಾಮಿ ಶಾಂಪೇನ್‌ಗಳು, ಮಾದಕ ಪೇಯಗಳ ದಾಸ್ತಾನು ಕಂಡು ಪೊಲೀಸರೇ ದಂಗಾಗಿದ್ದಾರೆ. ಭವ್ಯ ಬಂಗಲೆಯAತಿರುವ ಆರೋಪಿಯ ಮನೆಯಲ್ಲಿ ಒಳಗಿಂದೊಳಗೆ ಐಷಾರಾಮಿ ವ್ಯವಸ್ಥೆಯ ಜೊತೆಗೆ ಅಡಗು ತಾಣಗಳು ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇದೆ ಎಂದು ತಿಳಿದು ಬಂದಿದೆ.