
Punjab: ಹಿರಿಯ ಮ್ಯಾರಾಥಾನ್ ಪಟು ಫೌಜಾ ಸಿಂಗ್ ಸಾವು ಪ್ರಕರಣ; ಆರೋಪಿಯ ಬಂಧನ
16/07/2025 05:44 AM
ಜಗತ್ತಿನ ಅತ್ಯಂತ ಹಿರಿಯ ಮ್ಯಾರಥಾನ್ ಪಟು, 'ಟರ್ಬನ್ ಟೊರ್ನಾಡೊ' ಎಂದೇ ಖ್ಯಾತರಾಗಿದ್ದ ಫೌಜಾ ಸಿಂಗ್ ಅವರಿಗೆ ಡಿಕ್ಕಿ ಹೊಡೆದು ಸಾವಿಗೆ ಕಾರಣನಾಗಿದ್ದ ಆರೋಪಿ ಕಾರು ಚಾಲಕನನ್ನು ಬಂಧಿಸಲಾಗಿದೆ. ಪಂಜಾಬ್ನ ಜಲಂಧರ್ ಜಿಲ್ಲೆಯ ಕರ್ತಾರ್ಪುರದ ದಸೌಪುರ ಮೂಲದ ಅನಿವಾಸಿ ಭಾರತೀಯ ಅಮೃತ್ಪಾಲ್ ಸಿಂಗ್ ದಿಲೊನ್ (26) ಎಂಬಾತನನ್ನು ಬಂಧಿತ ಆರೋಪಿ. ಈತನ ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಆರೋಪಿಯು ಸೋಮವಾರ ಭೋಗ್ಪುರದಿಂದ ಕಿಶಾಘರ್ಗೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ಜಲಂಧರ್ ಪಠಾಣ್ಕೋಟ್ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 114 ವರ್ಷದ ಸಿಂಗ್ ಅವರಿಗೆ ಡಿಕ್ಕಿ ಹೊಡೆದಿದ್ದ.. ಡಿಕ್ಕಿ ರಭಸಕ್ಕೆ ಸಿಂಗ್ ಅವರು ಗಾಳಿಯಲ್ಲಿ 5-7 ಅಡಿ ಎತ್ತರಕ್ಕೆ ಹಾರಿ ಕೆಳಗೆ ಬಿದ್ದಿದ್ದರು. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸೋಮವಾರ ರಾತ್ರಿ ನಿಧನ ಹೊಂದಿದ್ದರು. ಬಂಧಿತ ಆರೋಪಿಯ ಅನಿವಾಸಿ ಭಾರತೀಯನಾಗಿದ್ದು ಕುಟುಂಬವು ಕೆನಡಾದಲ್ಲಿ ನೆಲೆಸಿದೆ. ಇತ್ತೀಚೆಗೆ ಈತ ದಸೌಪುರಕ್ಕೆ ಆಗಮಿಸಿದ್ದ. ಸದ್ಯ ಪೊಲೀಸರ ವಶದಲ್ಲಿರುವ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಬಳಿಕ ಪೊಲೀಸರು ಅಪಘಾತ ನಡೆದ ಸ್ಥಳದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಸಿಂಗ್ ಅವರಿಗೆ ಪಂಜಾಬ್ ನೋಂದಣಿಯ ಟೊಯೋಟಾ ಫಾರ್ಚೂನರ್ ಕಾರು ಡಿಕ್ಕಿ ಹೊಡೆದಿರುವುದು ಕಂಡುಬ0ದಿತ್ತು.
1911ರಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಫೌಜಾ ಸಿಂಗ್, ಒಡಹುಟ್ಟಿದ ನಾಲ್ವರಲ್ಲಿ ಅತ್ಯಂತ ಕಿರಿಯರಾಗಿದ್ದರು. ಮ್ಯಾರಥಾನ್ನಲ್ಲಿ ಭಾಗವಹಿಸಿದ ಮೊದಲ ಶತಾಯುಷಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವಿವಿಧ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲೂ ಭಾಗವಹಿಸಿದ್ದ ಅವರು ಅನೇಕ ದಾಖಲೆಗಳನ್ನು ನಿರ್ಮಿಸಿದ್ದರು. ಲಂಡನ್, ನ್ಯೂಯಾರ್ಕ್ ಮತ್ತು ಹಾಂಗ್ ಕಾಂಗ್ನಲ್ಲಿನ ಪ್ರಸಿದ್ಧ ಮ್ಯಾರಥಾನ್ಗಳು ಒಳಗೊಂಡ0ತೆ ಅವರು ವಿವಿಧೆಡೆ ತಮ್ಮ ಛಾಪು ಮೂಡಿಸಿದ್ದರು. ದುರ್ಬಲ ಕಾಲುಗಳೊಂದಿಗೆ ಜನಿಸಿದ್ದರೂ ಸಹ ಹಿರಿಯ ವಯಸ್ಸಿನಲ್ಲೂ ಅದ್ಭುತ ಯಶಸ್ಸು ಗಳಿಸುವ ಮೂಲಕ ವಿಸ್ಮಯವನ್ನುಂಟು ಮಾಡಿದ್ದರು.