
Sullia: ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದ ಸಿಬ್ಬಂದಿ;ಪೆರಾಜೆ ಜನ ನಿರಾಳ
16/07/2025 05:59 AM
ಕಳೆದ ಹಲವು ದಿನಗಳಿಂದ ಸುಳ್ಯದ ಅರಂತೋಡು ಪೆರಾಜೆ ಭಾಗದ ಕೃಷಿಕರ ನಿದ್ದೆಗೆಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಕಾರ್ಯಾಚರಣೆಯ ಮೂಲಕ ಅರಣ್ಯಕ್ಕೆ ಓಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಪೆರಾಜೆ ಭಾಗದ ಕೃಷಿ ತೋಟದಲ್ಲಿ ಕಾಡಾನೆ ಬೀಡು ಬಿಟ್ಟಿತ್ತು. ಇದರಿಂದಾಗಿ ಈ ಭಾಗದ ಜನರು ಮಕ್ಕಳು ಓಡಾಡಲು ಭಯ ಪಡುವ ವಾತಾವರಣ ನಿರ್ಮಾಣವಾಗಿತ್ತು. ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಕೊಡಗು ವಿಭಾಗದ ಎಲಿಫೆಂಟ್ ಟಾಸ್ಕ್ ಫೋರ್ಸ್ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಯನ್ನು ಬಂಗಾರಕೋಡಿ ಮಾರ್ಗವಾಗಿ ಭಾಗಮಂಡಲ ಮೀಸಲು ಅರಣ್ಯಕ್ಕೆ ಓಡಿಸಲು ನಿರ್ಧರಿಸಲಾಗಿತ್ತು. ಆದರೆ ಕಾಡಾನೆ ಪಥ ಬದಲಿಸಿತ್ತು. ಕೊನೆಗೂ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುವಲ್ಲಿ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.