Bangalore: ಮನೆಗೆಲಸದವಳ ಮೇಲೆ ಅತ್ಯಾಚಾರ ಪ್ರಕರಣ; ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ

Bangalore: ಮನೆಗೆಲಸದವಳ ಮೇಲೆ ಅತ್ಯಾಚಾರ ಪ್ರಕರಣ; ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ


ಮನೆಗೆಲಸದವಳ ಮೇಲಿನ ಅತ್ಯಾಚಾರ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಾದ -ಪ್ರತಿವಾದ ಸುದೀರ್ಘ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ನೀಡಿದ್ದಾರೆ.

ಜೀವಾವಧಿ ಶಿಕ್ಷೆ ಜೊತೆಗೆ 10 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಇದರಲ್ಲಿ ಸಂತ್ರಸ್ತೆಗೆ 7 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಲು ಸೂಚಿಸಿದೆ. ಇದಕ್ಕೂ ಮುನ್ನ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎಸ್‌ಪಿಪಿ ಬಿ.ಎನ್. ಜಗದೀಶ, ಅಧಿಕಾರಯುತ ಸ್ಥಾನದಲ್ಲಿದ್ದ ಪ್ರಜ್ವಲ್ ರೇವಣ್ಣ ಸಂತ್ರಸ್ತ ಮಹಿಳೆಯನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಅವಿದ್ಯಾವಂತೆಯಾಗಿದ್ದ ಆಕೆಯ ಮೇಲೆ ಪದೇಪದೆ ಅತ್ಯಾಚಾರ ನಡೆದಿದೆ. ಅಪರಾಧಿಯಿಂದ ಸಂತ್ರಸ್ತೆ ಸುಲಭವಾಗಿ ಬಲಿಯಾಗಿದ್ದಳು. ಆಕೆಯ ಒಪ್ಪಿಗೆಯಿಲ್ಲದೇ ಅತ್ಯಾಚಾರದ ವಿಡಿಯೋ ಸಹ ಮಾಡಿಕೊಂಡಿದ್ದರು. ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದಲೇ, ಅಪರಾಧಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದು, ಅವುಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ವಿಡಿಯೊ ಹೊರ ಬಂದ ನಂತರ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಡಿಯೋ ಬಹಿರಂಗವಾದ ಬಳಿಕ ಆಕೆ ಹಾಗೂ ಆಕೆಯ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಿಂಸೆ ಅನುಭವಿಸಿದ್ದಳು ಎಂದು ನ್ಯಾಯಾಲಯಕ್ಕೆ ವಿವರಿಸಿದರು. 


ಪ್ರಜ್ವಲ್ ಪರ ವಾದ ಮಂಡಿಸಿದ ವಕೀಲರಾದ ನಳೀನಾ ಮಾಯೇಗೌಡ, ಚುನಾವಣಾ ಸಂದರ್ಭದಲ್ಲಿಯೇ ವಿಡಿಯೋ ಹರಿಬಿಡಲಾಗಿದ್ದು, ಪ್ರಜ್ವಲ್ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ. ಪ್ರಜ್ವಲ್ ಯುವಕನಾಗಿದ್ದು ಆತನ ಭವಿಷ್ಯವನ್ನೂ ಗಮನಿಸಬೇಕು. ಈಗಾಗಲೇ ಮಾಧ್ಯಮಗಳಲ್ಲಿ ತೇಜೋವಧೆ ಆಗಿದೆ. ವಯಸ್ಸಾದ ತಂದೆ-ತಾಯಿ ಇದ್ದಾರೆ. ಅವರ ತಾತ ಮಾಜಿ ಪ್ರಧಾನಿಯಾಗಿದ್ದಾರೆ. ನ್ಯಾಯಾಲಯ ವಿಧಿಸುವ ಶಿಕ್ಷೆಯಿಂದ ಪ್ರಜ್ವಲ್ ಅವರ ಭವಿಷ್ಯಕ್ಕೆ ಹಾನಿಯಾಗಬಾರದು ಎಂದು ಮನವಿ ಮಾಡಿದರು. 

ವಾದ ಪ್ರತೀವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

Ads on article

Advertise in articles 1

advertising articles 2

Advertise under the article