-->
 ವಿವಾದಿತ ಹೆಚ್.ಎಂ.ಸಿ ಯುನೈಟೆಡ್ ಟ್ರೋಫಿ; 4 ತಂಡಗಳಿಗೆ ಬಹುಮಾನ ಮೊತ್ತ ಹಂಚಿಕೆ

ವಿವಾದಿತ ಹೆಚ್.ಎಂ.ಸಿ ಯುನೈಟೆಡ್ ಟ್ರೋಫಿ; 4 ತಂಡಗಳಿಗೆ ಬಹುಮಾನ ಮೊತ್ತ ಹಂಚಿಕೆ


ಬ್ರಹ್ಮಾವರದಲ್ಲಿ ಜ. 23ರಿಂದ ಮೂರು ದಿನ ಆಯೋಜಿಸಿದ್ದ ಎಚ್.ಎಂ.ಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ವಿವಾದದಿಂದಾಗಿ ಕೊನೇ ಕ್ಷಣದಲ್ಲಿ ರದ್ದುಗೊಂಡಿದ್ದು, ಇದೀಗ ಫೈನಲ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ತಲಾ 5 ಲಕ್ಷದಂತೆ ಒಟ್ಟು 20 ಲಕ್ಷ ಬಹುಮಾನ ಮೊತ್ತವನ್ನು ನೀಡಲಾಯಿತು. 


ಉಡುಪಿಯ ಮಣಿಪಾಲ ಇನ್ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಚ್.ಎಂ.ಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ ನಾಲ್ಕು ತಂಡಗಳಿಗೆ ತಲಾ 5 ಲಕ್ಷದಂತೆ ಬಹುಮಾನ ಮೊತ್ತವನ್ನು ಹಂಚಲಾಯಿತು. 


ಟೆನಿಸ್ ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಬಹುಮಾನ ಮೊತ್ತವಾಗಿದ್ದ ಈ ಟೂರ್ನಿಯಲ್ಲಿ ಚಾಂಪಿಯನ್ ತಂಡಕ್ಕೆ 25 ಲಕ್ಷ ರೂಪಾಯಿ ಹಾಗೂ ರನ್ನರ್ಸ್ ಅಪ್ ತಂಡಕ್ಕೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಆದರೆ ಜಾನ್ಸನ್ ಮತ್ತು ಪಾಂಚಜನ್ಯ ತಂಡಗಳ ನಡುವಿನ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದ ಅಂತಿಮ ಕ್ಷಣದಲ್ಲಿ ಉಂಟಾದ ವಿವಾದದಿಂದಾಗಿ ಟೂರ್ನಿಯೇ ರದ್ದಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಯೋಜಕರ ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಫೈನಲ್ ಪ್ರವೇಶಿಸಿದ ನಾಲ್ಕು ತಂಡಗಳಾದ ಖುಷಿ ಅಮರ್ ಪಾಂಚಜನ್ಯ, ಜಯಕರ್ನಾಟಕ ಬೆಂಗಳೂರು, ಇಝಾನ್ ಚೈತನ್ಯ ಫೈರ‍್ಸ್ ಎಚ್.ಎಂ ಎಕ್ತಾ ಹಾಗೂ ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ ತಲಾ 5 ಲಕ್ಷದಂತೆ ಬಹುಮಾನ ಮೊತ್ತವನ್ನು ಹಂಚಲಾಯಿತು. ವಿನ್ನರ್ ಹಾಗೂ ರನ್ನರ್ಸ್ ತಂಡವನ್ನು ಟಾಸ್ ಮೂಲಕ ಆಯ್ಕೆ ಮಾಡಲಾಯಿತು. ಟಾಸ್ ಮೂಲಕ ಖುಷಿ ಅಮರ್ ಪಾಂಚಜನ್ಯ ತಂಡವು ಟ್ರೋಫಿ ವಿಜೇತರಾಗಿದ್ದು, ಜಯಕರ್ನಾಟಕ ತಂಡ ರನ್ನರ್ಸ್ ಟ್ರೋಫಿಯನ್ನು ಪಡೆದುಕೊಂಡಿತು. 

ಟೂರ್ನಿ ಆಯೋಜಕರಾದ ಶಕೀಲ್ ಹೊನ್ನಾಳ ಅವರು ಮಾತನಾಡಿ, ಈ ಬಾರಿ ಆಯೋಜಿಸಿದ ಟೂರ್ನಿಯಲ್ಲಿ ಭಾಗವಹಿಸಿದ ತಂಡಗಳಿಗೆ ಮುಂಬರುವ ಟೂರ್ನಿಯಲ್ಲಿ ಉಚಿತ ಪ್ರವೇಶ ನೀಡಲಾಗುವುದು ಎಂದು ಘೋಷಿಸಿದ್ದರು. ಈ ವೇಳೆ ಸಂಘಟಕರಾದ ಕೆ.ಪಿ ಇಬ್ರಾಹಿಂ ಕಟಪಾಡಿ, ಸಂಜೀವ ಕೋಟ್ಯಾನ್, ಶಫೀ ಅಹಮ್ಮದ್ ಮೊದಲಾದವರು ಇದ್ದರು. 



Ads on article

Advertise in articles 1

advertising articles 2

Advertise under the article