-->
ಮುಂಗಡ ಟಿಕೆಟ್ ಹೊಂದಿದ್ದರೂ ಪ್ರಯಾಣಿಕರನ್ನು ಬಿಟ್ಟು ಹೊರಟ ಖಾಸಗಿ ಬಸ್; ಸ್ಥಳೀಯರ ಆಕ್ರೋಶ

ಮುಂಗಡ ಟಿಕೆಟ್ ಹೊಂದಿದ್ದರೂ ಪ್ರಯಾಣಿಕರನ್ನು ಬಿಟ್ಟು ಹೊರಟ ಖಾಸಗಿ ಬಸ್; ಸ್ಥಳೀಯರ ಆಕ್ರೋಶ


ಉಡುಪಿ ಜಿಲ್ಲೆಯ ಕೋಟ–ಮಣೂರಿನಿಂದ ಬೆಂಗಳೂರು ಪ್ರಯಾಣಿಸಲು ಮುಂಗಡ ಟಿಕೆಟ್ ಪಡೆದಿದ್ದ ಮಹಿಳೆ ಸೇರಿದಂತೆ ಮೂವರು ಪ್ರಯಾಣಿಕರನ್ನು ಬಿಟ್ಟು ಹೊರಟ ಖಾಸಗಿ ಬಸ್ ಸಿಬ್ಬಂದಿಯ ನಿರ್ಲಕ್ಷ್ಯ ವರ್ತನೆಯಿಂದಾಗಿ ಕೋಟದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಸಂಜೆ ಮುರ್ಡೇಶ್ವರದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಕೋಟ–ಮಣೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಾಯುತ್ತಿದ್ದರು. ಆದರೆ ಚಾಲಕ ನಿಗದಿತ ಬಸ್ ನಿಲ್ದಾಣದಲ್ಲಿ ವಾಹನವನ್ನು ನಿಲ್ಲಿಸದೇ, ಮಣೂರಿನಿಂದ ಸ್ವಲ್ಪ ದೂರ ಮುಂದೆ ಬಸ್ಸನ್ನು ನಿಲ್ಲಿಸಿದ್ದಾನೆ ಎನ್ನಲಾಗಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಮುಂದೆ ನಿಲ್ಲಿಸಿದ್ದ ಬಸ್ಸಿನ ಬಳಿ ತೆರಳಿ ಚಾಲಕನಿಗೆ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭ ಬಸ್ ನಿರ್ವಾಹಕ ಮಧ್ಯ ಪ್ರವೇಶಿಸಿ, ಮಹಿಳೆ ಹಾಗೂ ಯುವ ಪ್ರಯಾಣಿಕರೊಂದಿಗೆ ಅವಾಚ್ಯ ಪದ ಬಳಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ನಿರ್ವಾಹಕನ ವರ್ತನೆಗೆ ಆಕ್ರೋಶಗೊಂಡ ಪ್ರಯಾಣಿಕರು ತಮ್ಮ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದು, ತಕ್ಷಣ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ಕೋಟ ಪೆಟ್ರೋಲ್ ಬಂಕ್ ಸಮೀಪ ತಡೆದು ನಿಲ್ಲಿಸಿದರು.

 ಈ ವೇಳೆ ನಿರ್ವಾಹಕ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಪರಿಸ್ಥಿತಿ ತೀವ್ರಗೊಂಡು ಜಟಾಪಟಿಗೆ ತಿರುಗುವ ಹಂತಕ್ಕೆ ತಲುಪಿತು. ವಿಷಯ ತಿಳಿದು ಕೋಟ ಪೊಲೀಸ್ ಠಾಣೆಯ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಪೊಲೀಸರು ಪ್ರಯಾಣಿಕರು ಪಾವತಿಸಿದ್ದ ಮುಂಗಡ ಟಿಕೆಟ್ ಹಣವನ್ನು ವಾಪಸು ಕೊಡಿಸಿ, ಪ್ರಕರಣವನ್ನು ಶಮನಗೊಳಿಸಿದರು. ಬಳಿಕ ಬಸ್ಸಿಗೆ ಮುಂದಿನ ಪ್ರಯಾಣಕ್ಕೆ ಅನುಮತಿ ನೀಡಲಾಯಿತು. ಅವಮಾನಕ್ಕೊಳಗಾದ ಮೂವರು ಪ್ರಯಾಣಿಕರು ನಂತರ ಬೇರೆ ಬಸ್ಸಿನಲ್ಲಿ ಬೆಂಗಳೂರು ಕಡೆ ತಮ್ಮ ಪ್ರಯಾಣ ಮುಂದುವರಿಸಿದರು.

ಖಾಸಗಿ ಬಸ್ ಸಿಬ್ಬಂದಿಯ ಅಸಭ್ಯ ವರ್ತನೆ ಹಾಗೂ ಪ್ರಯಾಣಿಕರ ಮೇಲಿನ ನಿರ್ಲಕ್ಷ್ಯ ಕ್ರಮದ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article