ಕೌಟುಂಬಿಕ ಕಲಹ: ಗಂಡನಿಂದ ಹಲ್ಲೆಗೊಳಗಾದ ಮಹಿಳೆ ಸಾವು
Monday, February 02, 2026
ಕೌಟುಂಬಿಕ ಕಲಹದಿಂದಾಗಿ ಗಂಡನಿಂದ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗುಮ್ಮೆಟ್ಟು ನಿವಾಸಿ ಗೀತಾ ಎಂಬವರು ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿ ಸುನೀಲ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜನವರಿ 27ರಂದು ಬೆಳಿಗ್ಗೆ ಕೌಟುಂಬಿಕ ಕಲಹದಿಂದಾಗಿ ಗೀತಾ ಮತ್ತು ಅವರ ಪತಿ ನಡುವೆ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಸುನೀಲ್ ಕುಮಾರ್ ಅವರು ಗೀತಾ ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಗೀತಾ ಅವರನ್ನು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ವೈದ್ಯರ ಮಾಹಿತಿ ಪ್ರಕಾರ ಗೀತಾ ಅವರ ಎದೆ ಮೂಳೆಗಳು ಮುರಿದು, ಹೊಟ್ಟೆಯ ಒಳಭಾಗಕ್ಕೂ ತೀವ್ರ ಗಾಯಗಳಾಗಿದ್ದವು. ಅವರು ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 2ರಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬOಧಿಸಿದOತೆ ಕಾರ್ಕಳ ಗ್ರಾಮಾಂತರ ಪೊಲೀಸರು ಆರೋಪಿ ಸುನೀಲ್ ಕುಮಾರ್ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೀಗ ಮಹಿಳೆ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.