ಸಿರಿಧಾನ್ಯ ಬಳಕೆಯಿಂದ ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ- ಡಾ. ಉದಯ್ ಕುಮಾರ್ ಶೆಟ್ಟಿ
ಸಿರಿಧಾನ್ಯಗಳಲ್ಲಿ ನಾರಿನಾಂಶ, ಕಬ್ಬಿಣಾಂಶಗಳು ಹೆಚ್ಚಾಗಿರುವುದರಿಂದ ಇದು ಪೋಷಕಾಂಶಗಳ ಕಣಜವಿದ್ದಂತೆ. ದೈನಂದಿನ ಆಹಾರ ಪದ್ಧತಿಯಲ್ಲಿ ಪ್ರತಿಯೊಬ್ಬರೂ ಸಿರಿಧಾನ್ಯ ಬಳಸುವುದರಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ- ಎಣ್ಣೆಕಾಳು ಯೋಜನೆ ಅಡಿ ಜಿಲ್ಲಾ ಮಟ್ಟದ ಕಾರ್ಯಾಗಾರ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಠಿಕ ಅಭಿಯಾನ ಯೋಜನೆ ಅಡಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಹೆಚ್ಚು ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರೊಂದಿಗೆ ಕೃಷಿ ಕ್ಷೇತ್ರಕ್ಕೆ ವಿಫುಲ ಅವಕಾಶ ಕಲ್ಪಿಸಿದೆ. ಕೃಷಿ ಪ್ರಧಾನವಾದ ದೇಶದಲ್ಲಿ ಶೇ. 60 ರಷ್ಟು ಜನರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದರೂ ಸಹ ಕೇವಲ ಶೇ. 17-18 ರಷ್ಟು ಮಾತ್ರ ಕೃಷಿ ವಲಯದಿಂದ ಜಿ.ಡಿ.ಪಿ ಗೆ ಕೊಡುಗೆಯಾಗಿ ನೀಡುತ್ತಿದ್ದೇವೆ. ಸ್ವಾತಂತ್ರö ಪೂರ್ವದಲ್ಲಿ ಕೃಷಿ ಆದಾರಿತ ಆರ್ಥಿಕತೆ ಹೊಂದಿದ್ದ ನಾವು ಇಂದು ದೇಶದ ಒಟ್ಟು 343 ಲಕ್ಷ ಕೋಟಿ ಜಿ.ಡಿ.ಪಿ ಯಲ್ಲಿ ಕೇವಲ ಕೃಷಿ ಕ್ಷೇತ್ರದಿಂದ 45-50 ಲಕ್ಷ ಕೋಟಿಗಳಷ್ಟು ಮಾತ್ರ ನೀಡುತ್ತಿದ್ದೇವೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿ.ಡಿ.ಪಿ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ದೇಶದ ಕೈಗಾರಿಕಾ, ಸೇವಾ ಕ್ಷೇತ್ರಗಳೊಂದಿಗೆ ಸ್ಫರ್ಧೆ ನೀಡುವಂತೆ ಕೃಷಿ ಕ್ಷೇತ್ರ ಬೆಳೆಯಬೇಕು ಎಂದರು. ಪ್ರಗತಿಪರ ರೈತರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕೃಷಿಯಲ್ಲಿನ ಗುಣಮಟ್ಟದ ಉತ್ಪನ್ನಗಳಿಗೆ ಸದಾ ಬೇಡಿಕೆ ಇರುತ್ತದೆ. ಯುವ ರೈತರು ಸಾವಯವ ಕೃಷಿ ಬಗ್ಗೆ ಹೆಚ್ಚು ಒಲುವು ಹೊಂದಿದ್ದಲ್ಲಿ ಕೃಷಿ ಉತ್ಪನ್ನ ಹೆಚ್ಚಿಸಲು ಸಹಕಾರಿಯಾಗಲಿದೆ. ಕೈಗಾರಿಕೆ ಹಾಗೂ ಸೇವಾ ವಲಯವನ್ನು ಮೀರಿ ಕೃಷಿ ವಲಯ ಬೆಳೆಯಬೇಕು. ಇದಕ್ಕೆ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಉತ್ಪನ್ನಗಳ ಗುಣಮಟ್ಟ ಹೆಚ್ಚಿಸಿಕೊಳ್ಳುವ ವೈಜ್ಞಾನಿಕ ಚಿಂತನೆ ಅತಿ ಅಗತ್ಯವಾಗಿದೆ ಎಂದ ಅವರು, ಕೃಷಿ ಉತ್ಪನ್ನಗಳ ಗುಣಮಟ್ಟದ ಉತ್ಪಾದನೆಗೆ ಹಾಗೂ ಕ್ರಿಯಾಶೀಲ ನಿರ್ವಹಣೆಗೆ ಇಂತಹ ಕಾರ್ಯಾಗಾರಗಳು ಪ್ರಯೋಜನವಾಗಲಿದ್ದು, ಪ್ರತಿಯೊಬ್ಬ ರೈತ ಬಾಂಧವರು, ರೈತ ಮಹಿಳೆಯರು ಕಾರ್ಯಾಗಾರದ ಲಾಭ ಪಡೆದುಕೊಳ್ಳುವಂತಾಗಲಿ ಎಂದರು.
ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪ್ರದೀಪ್ ಹೆಬ್ಬಾರ್ ಮಾತನಾಡಿ, ದೈನಂದಿನ ಜೀವನದಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು. ಇಂತಹ ಮಾಹಿತಿ ಕಾರ್ಯಕ್ರಮಗಳು ಸದೃಢ ಆರೋಗ್ಯ ಹೊಂದಲು ಸಹಕಾರಿಯಾಗಲಿವೆ. ಸಿರಿಧಾನ್ಯಗಳ ಬೇಸಾಯ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸುವ ಕುರಿತು ಮಾಹಿತಿ ನೀಡುವ ಇಂತಹ ಕಾರ್ಯಕ್ರಮಗಳಲ್ಲಿ ರೈತರು ಹೆಚ್ಚಾಗಿ ಭಾಗವಹಿಸುವಂತೆ ಕರೆ ನೀಡಿದರು.
ಪ್ರಗತಿಪರ ರೈತ ಹಾಗೂ ಬ್ರಹ್ಮಾವರ ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ, ರೈತರು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕೈಗೊಳ್ಳುವ ಮೂಲಕ ಹೆಚ್ಚಿನ ಲಾಭ ಪಡೆಯಬಹುದು. ಸಿರಿಧಾನ್ಯಗಳ ಬಳಕೆ, ಪೌಷ್ಟಿಕಾಂಶದ ಮಹತ್ವ ಮತ್ತು ದೇಸಿ ತಳಿಗಳ ಸಂರಕ್ಷಣೆಯನ್ನು ಉತ್ತೇಜಿಸಲು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಆಯೋಜಿಸಲಾಗುತ್ತಿದ್ದು, ಈ ಹಬ್ಬವು ವಸ್ತು ಪ್ರದರ್ಶನ, ಸಿರಿಧಾನ್ಯ ಉತ್ಪನ್ನಗಳ ಮಾರಾಟ, ರೈತರಿಗೆ ಮಾಹಿತಿ ಮತ್ತು ಅರಿವು ಮೂಡಿಸುವ ವೇದಿಕೆಯಾಗಲಿದೆ ಎಂದರು.
ಬೈಂದೂರು ಕೃಷಿಕ ಸಮಾಜದ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್, ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಶ್ರೀದೇವಿ ಜಕ್ಕೆರಾಳ್ ಅವರು ನೆಲಗಡಲೆ ಬೆಳೆಯಲ್ಲಿ ನೂತನ ತಳಿಗಳು ಮತ್ತು ತಾಂತ್ರೀಕತೆಗಳ ಬಗ್ಗೆ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ ಅವರು ಆರೋಗ್ಯದ ಹಿತದೃಷ್ಟಿಯಿಂದ ದಿನನಿತ್ಯ ಜೀವನದಲ್ಲಿ ಸಿರಿಧಾನ್ಯಗಳ ಬಳಕೆ ಬಗ್ಗೆ, ರೈತ ಗಿರೀಶ್ ಪ್ರಭು ಸಾವಯವ ಕೃಷಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಖಾದ್ಯ ತೈಲ ಸ್ವಾವಲಂಬನೆಗಾಗಿ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಎಣ್ಣೆಕಾಳು ಯೋಜನೆ ಕುರಿತ ತಾಂತ್ರಿಕತೆ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ಕೃಷಿ ಪ್ರಶಸ್ತಿ ಪಡೆದ ರೈತರು ಹಾಗೂ ರೈತ ಮಹಿಳೆಯರನ್ನು ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯ ವಿಜೇತರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಕೃಷಿ ಉತ್ಪನ್ನಗಳ ವಸ್ತು ಪ್ರದರ್ಶನ ಮಳಿಗೆಗಳನ್ನು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಉದ್ಘಾಟಿಸಿದರು. ಬ್ರಹ್ಮಾವರ ತಾಲೂಕು ಕೃಷಿ ಸಮಾಜದ ಸದಸ್ಯ ದಿನೇಶ್ ಕಾಮತ್, ಕೃಷಿ ಇಲಾಖೆಯ ಸಿಬ್ಬಂದಿಗಳು, ಜಿಲ್ಲೆಯ ರೈತರು, ರೈತ ಮಹಿಳೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಹಾಯಕ ಕೃಷಿ ನಿರ್ದೇಶಕಿ ಪೂಜಾ ನಾಯ್ಕ್ ಎಂ ನಿರೂಪಿಸಿ, ಉಪಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ್ ವಂದಿಸಿದರು.
.jpeg)
.jpeg)
.jpeg)