-->
 ವಾರಂಟ್ ಜಾರಿಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ

ವಾರಂಟ್ ಜಾರಿಗೆ ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿ


ವಾರಂಟ್ ಜಾರಿಗೊಳಿಸಲು ತೆರಳಿದ ಪೊಲೀಸರ ಮೇಲೆ ಆರೋಪಿಯೊಬ್ಬ ಹಲ್ಲೆ ನಡೆಸಿ, ಇಲಾಖೆಯ ವಾಕಿಟಾಕಿಯನ್ನು ಜಖಂಗೊಳಿಸಿ ಜೀವ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಲಕ್ಷ್ಮೀನಗರದಲ್ಲಿ ನಡೆದಿದೆ. 

ಮಲ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಸುರೇಶ್ ಕುಮಾರ್ ಅವರು ಮಲ್ಪೆ ವೃತ್ತ ನಿರೀಕ್ಷಕರ ಆದೇಶದಂತೆ ಬಾಕಿ ಇರುವ ವಾರಂಟ್ ಜಾರಿಗಾಗಿ ಮಾರ್ಚ್ 11ರಂದು ಬೆಳಿಗ್ಗೆ ಸುಮಾರು 6.50ರ ಸುಮಾರಿಗೆ ಠಾಣೆಯ ಹೆಡ್ ಕಾನ್ಸಟೇಬಲ್ ಆದರ್ಶ ಅವರೊಂದಿಗೆ ವಾರಂಟ್ ಅಸಾಮಿಯಾದ ಕಿಶೋರ್ ಎಂಬಾತನ ಮನೆಗೆ ತೆರಳಿದ್ದರು.

ಬ್ರಹ್ಮಾವರ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಲಕ್ಷ್ಮೀನಗರದಲ್ಲಿರುವ ಮನೆ ನಂ. 8-179ರ ಬಳಿ ತಲುಪಿ ಮನೆಯ ಅಂಗಳದಲ್ಲಿ ನಿಂತು ಆರೋಪಿಯನ್ನು ಕರೆದಾಗ, ಆತನು ಪೊಲೀಸರನ್ನು ಕಂಡು ಮನೆಯಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸುರೇಶ್ ಕುಮಾರ್ ಹಾಗೂ ಆದರ್ಶ ಅವರು ಆರೋಪಿಯನ್ನು ಹಿಡಿದಿದ್ದಾರೆ.

ಆದರೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಿಶೋರ್ ಹೆಡ್ ಕಾನ್ಸ್ಟೇಬಲ್ ಸುರೇಶ್ ಕುಮಾರ್ ಅವರ ಮುಖಕ್ಕೆ ಹಲ್ಲೆ ಮಾಡಿ, ಮುಂಗೈಯಿOದ ಎಡಭಾಗದ ಪಕ್ಕೆಲುಬಿಗೆ ತಿವಿದಿದ್ದಾನೆ. ಅಲ್ಲದೆ ಅವರೊಂದಿಗೆ ಇದ್ದ ಆದರ್ಶ ಅವರ ಮುಖಕ್ಕೆ ಕೈಯಿಂದ ಹೊಡೆದು, ಎಡಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ಪರಚಿ, ಎಡಭುಜಕ್ಕೆ ಮುಷ್ಠಿಯಿಂದ ಗುದ್ದಿದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದರ ಜೊತೆಗೆ ಇಲಾಖೆಯ ವಾಕಿಟಾಕಿಯನ್ನು ಕಿತ್ತು ನೆಲಕ್ಕೆ ಎಸೆದು ಜಖಂಗೊಳಿಸಿದ್ದಾನೆ. ಬಳಿಕ ತನ್ನ ತಾಯಿಯನ್ನು ಕರೆದು ಮನೆಯಿಂದ ಕತ್ತಿ ತಂದುಕೊಡು, ಪೊಲೀಸರನ್ನು ಇಲ್ಲಿಯೇ ಕಡಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. 

ಪೊಲೀಸರು ಆರೋಪಿಯನ್ನು ವಾರೆಂಟ್ ಮೇರೆಗೆ ವಶಕ್ಕೆ ಪಡೆದು ಮಲ್ಪೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸುರೇಶ್ ಕುಮಾರ್ ಮತ್ತು ಆದರ್ಶ ಅವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 






 

Ads on article

Advertise in articles 1

advertising articles 2

Advertise under the article