ಬೀಡಿನಗುಡ್ಡೆ: ಹರೀಶ್ಚಂದ್ರ ವೃತ್ತ ವೈಜ್ಞಾನಿಕ ರೀತಿಯಲ್ಲಿ ಮರುನಿರ್ಮಾಣವಾಗಲಿ (Video)
Thursday, March 12, 2026
ಉಡುಪಿ ನಗರಸಭಾ ವ್ಯಾಪ್ತಿಯ ಬೀಡಿನಗುಡ್ಡೆಯಲ್ಲಿರುವ ಹರೀಶ್ಚಂದ್ರ ವೃತ್ತವನ್ನು ವೈಜ್ಞಾನಿಕ ರೀತಿಯಲ್ಲಿ ಮರುನಿರ್ಮಾಣ ಮಾಡಬೇಕೆನ್ನುವ ಒತ್ತಾಯ ವ್ಯಕ್ತವಾಗುತ್ತಿದೆ.
ಉಡುಪಿ ನಗರಸಭಾ ವ್ಯಾಪ್ತಿಯ ಬೀಡಿನಗುಡ್ಡೆಯಲ್ಲಿರುವ ಹರೀಶ್ಚಂದ್ರ ವೃತ್ತದ ನಡುವೆ ಹೈ ಮಾಸ್ಟ್ ದೀಪ ಕೆಟ್ಟಿರುವ ಹಿನ್ನೆಲೆಯಲ್ಲಿ ದೀಪ ಹಾಕುವ ಕಂಬ ದುರಸ್ಥಿಗೆ ಕ್ರಮಕೈಗೊಳ್ಳಲಾಗಿದೆ. ತುಕ್ಕು ಹಿಡಿದು ನಜ್ಜು ಗುಜ್ಜಾಗಿದ್ದ ಕಂಬವನ್ನು ಕ್ರೇನ್ ಬಳಸಿ, ತೆಗೆಯಲಾಗಿತ್ತು. ಮತ್ತೆ ಹೊಸ ಹೈಮಾಸ್ಟ್ ದೀಪ ಕಂಬ ಅಳವಡಿಸಲು ಕಾಮಗಾರಿ ನಡೆಯುತ್ತಿದೆ. ಈ ಮಧ್ಯೆ ಕಂಬವನ್ನು ಕ್ರೇನ್ ಮೂಲಕ ತೆಗೆಯುವ ವೇಳೆ ಸರ್ಕಲ್ ನ ಭಾಗಕ್ಕೆ ಹಾನಿಯಾಗಿದ್ದು, ಮತ್ತೆ ಸಿಮೆಂಟ್ ತೇಪೆ ಹಾಕಲಾಗಿದೆ. ಉಡುಪಿ ನಗರದಿಂದ ಕೇವಲ 2ಕಿಲೋ ಮೀಟರ್ ದೂರದಲ್ಲಿರುವ ಈ ಹರೀಶ್ಚಂದ್ರ ವೃತ್ತವನ್ನು ನಗರ ಸೌಂದರ್ಯದ ದೃಷ್ಟಿಯಿಂದ ಸಂಪೂರ್ಣವಾಗಿ ಮರು ನಿರ್ಮಾಣ ಮಾಡಬೇಕಿದ್ದ ನಗರಸಭೆ ಬರೀ ತೇಪೆ ಹಾಕುವ ಕೆಲಸಕ್ಕೆ ಮುಂದಾಗಿರುವ ಬಗ್ಗೆ ಸ್ಥಳೀಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಅಸಮಾಧಾನವಿದೆ.
ಈ ವೃತ್ತವು ವಿಶಾಲವಾದ ಬೀಡಿನಗುಡ್ಡೆ ಜಂಕ್ಷನ್‌ನ ಒಂದು ಬದಿಗೆ ಸರಿದಂತೆ ಇದ್ದು, ಅವೈಜ್ಞಾನಿಕವಾಗಿದೆ. ಹನುಮಾನ್ ಜಂಕ್ಷನ್ ನಿಂದ ಬರುವ ಘನ ವಾಹನಗಳಾದ ಬಸ್ ಹಾಗೂ ಲಾರಿಗಳು ವೃತ್ತದ ಎಡಕ್ಕೆ ತಿರುಗದೇ ನೇರವಾಗಿ ಬಲ ಭಾಗದಿಂದಲೇ ಚಲಿಸುತ್ತಿರುವುದರಿಂದ ವಾಹನ ಚಾಲಕರಲ್ಲಿ ಗೊಂದಲ ಹಾಗೂ ಸಣ್ಣ ಪುಟ್ಟ ಅಪಘಾತಗಳು ಉಂಟಾಗುತ್ತಿವೆ. ವಿಶಾಲವಾದ, ವೈಜ್ಞಾನಿಕವಾಗಿರುವ ವೃತ್ತ ನಿರ್ಮಾಣ ಇಂದಿನ ಅಗತ್ಯವಾಗಿದೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ. ಒಂದು ನಗರಸಭೆ ಮನಸ್ಸು ಮಾಡಿ ಈ ವೃತ್ತವನ್ನು ಅಭಿವೃದ್ಧಿಪಡಿಸುವುದೇ ಆದಲ್ಲಿ ಜಾಹೀರಾತು ಫಲಕಗಳ ವೃತ್ತ ನಿರ್ಮಾಣವಾಗುವುದು ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

