ಸಂತೆಕಟ್ಟೆ ಮೇಲ್ಸೇತುವೆ ಇಂದಿನಿಂದ ಸಂಚಾರಕ್ಕೆ ಮುಕ್ತ(Video)
Monday, March 30, 2026
ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಸಂತಕಟ್ಟೆಯಲ್ಲಿ ಸುಮಾರು 27.4 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇಂದಿನಿಂದ ವಾಹನಕ್ಕೆ ಸಂಚಾರಕ್ಕೆ ಮುಕ್ತವಾಗಿದೆ.
ಕುಂದಾಪುರ-ಉಡುಪಿ ನಡುವಿನ ಸಂಚಾರ ಸುಗಮಗೊಳಿಸುವುದು ಮತ್ತು ಸಂತೆಕಟ್ಟೆ ಜಂಕ್ಷನ್‌ನಲ್ಲಿನ ದಟ್ಟಣೆ ಕಡಿಮೆ ಮಾಡುವ ಉದ್ದೇಶವನ್ನಿಟ್ಟುಕೊಂಡು 2023ರ ಜನವರಿಯಲ್ಲಿ ಆರಂಭವಾದ ಈ ಯೋಜನೆ ಭೂಕುಸಿತದಂತಹ ತಾಂತ್ರಿಕ ಸಮಸ್ಯೆಗಳಿಂದಾಗಿ ವಿಳಂಬವಾಗಿತ್ತು. ಇಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸಂತೆಕಟ್ಟೆ ಮೇಲ್ಸೇತುವೆ ಸ್ಥಳಕ್ಕೆ ತೆರಳಿ ಸಂಚಾರಕ್ಕೆ ಮುಕ್ತವಾಗಿದೆ ಎಂದು ಘೋಷಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಸಣ್ಣ ಪುಟ್ಟ ಕಾಮಗಾರಿ ಬಾಕಿ ಇದೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ ಎಂಬ ಮಾಹಿತಿ ಇದೆ. ಬಂಡೆ ಸಿಕ್ಕಿದ ಕಾರಣ ಕಾಮಗಾರಿ ಸ್ವಲ್ಪ ತಡವಾಗಿದೆ. ಈ ಬಗ್ಗೆ ಸಲಹೆ ನೀಡಿದ, ಟೀಕೆ ಮಾಡಿದ ಎಲ್ಲರಿಗೂ ಕೃತಜ್ಞತೆ ಎಂದು ಸಂಸದ ಕೋಟ ಹೇಳಿದರು.
ಸಂತೆಕಟ್ಟೆ ಜಂಕ್ಷನ್‌ನಲ್ಲಿಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಈ ಕಾಮಗಾರಿಯಿಂದಾಗಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಅವಲಂಬಿಸಬೇಕಾಗಿತ್ತು, ಆದರೆ ಈಗ ಹೆದ್ದಾರಿಯಲ್ಲಿ ನೇರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ದೀರ್ಘಕಾಲದಿಂದ ಇದ್ದ ಸಂಚಾರ ದಟ್ಟಣೆಗೆ ಈಗ ಮುಕ್ತಿ ಸಿಕ್ಕಂತಾಗಿದೆ. ಸರ್ವಿಸ್ ರಸ್ತೆಗಳ ಕಾಮಗಾರಿಯೂ ಪೂರ್ಣಗೊಂಡಿರುವುದರಿಂದ ಕಲ್ಯಾಣಪುರ ಮತ್ತು ಸುತ್ತಮುತ್ತಲಿನ ಸ್ಥಳೀಯ ಸಂಚಾರ ಸುಲಭವಾಗಲಿದೆ.