-->
ಮೇ. 1ರಿಂದ ಅಬಕಾರಿ ಸುಂಕ ಪರಿಷ್ಕರಣೆ: ದುಬಾರಿಯಾಗಲಿದೆ ಮದ್ಯ

ಮೇ. 1ರಿಂದ ಅಬಕಾರಿ ಸುಂಕ ಪರಿಷ್ಕರಣೆ: ದುಬಾರಿಯಾಗಲಿದೆ ಮದ್ಯ


ರಾಜ್ಯ ಸರ್ಕಾರ ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್ ನೀಡಲು ಮುಂದಾಗಿದೆ. 
ಮೇ 1ರಿಂದ ಜಾರಿಗೆ ಬರುವಂತೆ ಅಬಕಾರಿ ಸುಂಕದ ಸ್ಲ್ಯಾಬ್‌ಗಳನ್ನು ಪರಿಷ್ಕರಿಸಲು ಸಜ್ಜಾಗಿದ್ದು, ಇದರಿಂದ ಬಹುತೇಕ ಮದ್ಯದ ಬ್ರಾಂಡ್‌ಗಳ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. 

 ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದು ಐದನೇ ಬಾರಿಗೆ ಮದ್ಯದ ದರ ಪರಿಷ್ಕರಣೆ ಮಾಡುತ್ತಿರುವುದು.ಈ ಬಾರಿ ಸರ್ಕಾರವು ಸಾಂಪ್ರದಾಯಿಕ ಬೆಲೆ ಆಧಾರಿತ ತೆರಿಗೆ ಪದ್ಧತಿಯನ್ನು ಕೈಬಿಟ್ಟು, ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸುವ ನೂತನ ನೀತಿಯನ್ನು ಜಾರಿಗೆ ತರುತ್ತಿದೆ. ಕರ್ನಾಟಕ ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಈ ಬದಲಾವಣೆ ಮಾಡಲಾಗುತ್ತಿದ್ದು, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಎಷ್ಟು ಹೆಚ್ಚಿರುತ್ತದೆಯೋ ತೆರಿಗೆ ಕೂಡ ಅಷ್ಟೇ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಪ್ರೀಮಿಯಂ ಮದ್ಯದ ದರದಲ್ಲಿ ಅಲ್ಪ ಇಳಿಕೆಯಾಗುವ ನಿರೀಕ್ಷೆಯಿದ್ದರೂ, ರಾಜ್ಯದ ಒಟ್ಟು ಮದ್ಯ ಮಾರಾಟದಲ್ಲಿ ಶೇ. 80ರಷ್ಟು ಪಾಲು ಹೊಂದಿರುವ ಸಾಮಾನ್ಯ ಮದ್ಯದ ಬೆಲೆ ಶೇ. 20ರಷ್ಟು ಏರಿಕೆಯಾಗಲಿದೆ.ವಿಶೇಷವಾಗಿ ಮೊದಲ ನಾಲ್ಕು ಸ್ಲ್ಯಾಬ್‌ಗಳ ಅಡಿಯಲ್ಲಿ ಬರುವ ಮದ್ಯದ ದರಗಳಲ್ಲಿ ಗಣನೀಯ ವ್ಯತ್ಯಾಸವಾಗಲಿದೆ. ಲಭ್ಯವಿರುವ ಮಾಹಿತಿಯಂತೆ, ಸ್ಲ್ಯಾಬ್-1 ರ ಮದ್ಯದ ದರ ₹80 ರಿಂದ ₹95ಕ್ಕೆ ಏರಿಕೆಯಾಗಲಿದ್ದರೆ, ಸ್ಲ್ಯಾಬ್-2 ರ ದರ ₹110ಕ್ಕೆ ತಲುಪಲಿದೆ. ಅದೇ ರೀತಿ ಸ್ಲ್ಯಾಬ್-3 ಮತ್ತು ಸ್ಲ್ಯಾಬ್-4 ರ ಮದ್ಯದ ಬೆಲೆಗಳಲ್ಲಿ ಕ್ರಮವಾಗಿ ₹15 ಮತ್ತು ₹20 ರಷ್ಟು ಏರಿಕೆಯಾಗುವ ಅಂದಾಜಿದೆ. ಒಂದು ಫುಲ್ ಬಾಟಲ್ ಮದ್ಯದ ಮೇಲೆ ಎಂಆರ್‌ಪಿ ದರದಲ್ಲಿ ಸುಮಾರು ₹50 ರಿಂದ ₹100 ರಷ್ಟು ಹೊರೆ ಬೀಳಲಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಈ ಬೆಲೆ ಮದ್ಯಪ್ರಿಯರ ಪಾಲಿಗೆ ಮತ್ತಷ್ಟು ಕಹಿಯಾಗಲಿದೆ.

ಫೆಬ್ರವರಿ ಬಜೆಟ್‌ನಲ್ಲಿ ಘೋಷಿಸಿದಂತೆ ಅಬಕಾರಿ ಆದಾಯದ ಗುರಿಯನ್ನು ತಲುಪಲು ಈ ಕ್ರಮ ಅನಿವಾರ್ಯ ಎಂದು ಸರ್ಕಾರ ಸಮರ್ಥಿಸಿಕೊಂಡಿದ್ದರೂ, ಮದ್ಯದ ವ್ಯಾಪಾರಿಗಳು ಮತ್ತು ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪದೇ ಪದೇ ಮದ್ಯಪ್ರಿಯರನ್ನೇ ಗುರಿಯಾಗಿಸಿಕೊಳ್ಳುತ್ತಿದೆ ಎಂದು ವ್ಯಾಪಾರಿಗಳ ಸಂಘ ಆಪಾದಿಸಿದೆ. ಮೇ ಮೊದಲ ವಾರದಿಂದ ಹೊಸ ದರಗಳು ಅಧಿಕೃತವಾಗಿ ಜಾರಿಗೆ ಬರಲಿದೆ. 


Ads on article

Advertise in articles 1

advertising articles 2

Advertise under the article