ಉಡುಪಿ ಡಿಸಿ ಕಚೇರಿ ಆವರಣದ ಮರ ಕಡಿದ ವಿಚಾರ: ಹೊರಗುತ್ತಿಗೆ ಸಿಬ್ಬಂದಿಗಳ ವಜಾ
Wednesday, April 29, 2026
ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಲವು ಮರಗಳನ್ನು ಕಡಿದ ವಿಚಾರಕ್ಕೆ ಸಂಬಂಧಿಸಿ ಜಿಲ್ಲಾ ಸಂಕೀರ್ಣದ ನಿರ್ವಹಣಾ ಸಮಿತಿಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಹೊರಗುತ್ತಿಗೆ ಸಿಬ್ಬಂದಿಯನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮಾವಿನ ಹಣ್ಣು ಕೊಯ್ಯುವಾಗ ವಿದ್ಯುತ್ ತಂತಿ ತಗಲಿ ಮೃತಪಟ್ಟ ಹಿನ್ನಲೆಯಲ್ಲಿ ಸ್ಥಳವನ್ನು ಪರಿಶೀಲಿಸಿ, ಮರಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡದೇ ಹೈಟೆನ್ಸನ್ ತಂತಿಗಳನ್ನು ಮೇಲೇರಿಸುವ/ಯುಜಿ ಕೇಬಲ್ಗಳನ್ನು ಅಳವಡಿಸುವ ಬಗ್ಗೆ ತಗಲುವ ವೆಚ್ಚದ ಕುರಿತು ಅಂದಾಜು ಪಟ್ಟಿಯನ್ನು ಸಲ್ಲಿಸುವಂತೆ ಮೆಸ್ಕಾಂ ಇಲಾಖೆಗೆ ಸ್ಪಷ್ಟ ನಿರ್ದೇಶನವನ್ನು ನೀಡಲಾಗಿತ್ತು. ಆದರೆ ಮರಗಳನ್ನು ಏಕಾಏಕಿ ಕಡಿಯಲಾಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಜಿಲ್ಲಾ ಸಂಕೀರ್ಣದ ನಿರ್ವಹಣೆಯ ಜವಾಬ್ದಾರಿ ಯನ್ನು ಹೊತ್ತಿರುವ ಅಧಿಕಾರಿ, ಮರ ಕಡಿಯುವ ಯಾವುದೇ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೆ ತರದೆ ಕರ್ತವ್ಯ ಲೋಪ ಎಸಗಿರುವುದು ಗಮನಕ್ಕೆ ಬಂದಿದೆ. ಮರ ಗಿಡಗಳನ್ನು ಕಡಿಯದಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಕೂಡ ಈ ರೀತಿ ಮರಗಳನ್ನು ಕಡಿದಿರುವುದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಕಛೇರಿ ಸಂಕೀರ್ಣದ ಕೋರ್ ಕಮಿಟಿಯ ಸದಸ್ಯ ಕಾರ್ಯದರ್ಶಿ ಮೇಲೆ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಮತ್ತು ಇಬ್ಬರು ಹೊರಗುತ್ತಿಗೆ ಸಿಬ್ಬಂದಿಗಳನ್ನು ಕರ್ತವ್ಯದಿಂದ ವಜಾ ಗೊಳಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
