-->
ಕಾಡುಪ್ರಾಣಿಗಳ ದಾಹ ತಣಿಸಲು ನೀರಿನ ತೊಟ್ಟಿ: ಮೊಳಹಳ್ಳಿ ಕೃಷಿಕನ ಮಾನವೀಯ ಕಾರ್ಯ

ಕಾಡುಪ್ರಾಣಿಗಳ ದಾಹ ತಣಿಸಲು ನೀರಿನ ತೊಟ್ಟಿ: ಮೊಳಹಳ್ಳಿ ಕೃಷಿಕನ ಮಾನವೀಯ ಕಾರ್ಯ



ಕರಾವಳಿಯಲ್ಲಿ ದಿನೇ ದಿನೇ ಬಿಸಿಲ ಝಳ ತೀವ್ರವಾಗಿ ಹೆಚ್ಚುತ್ತಿದೆ. ಕಾಡು ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ. ಇದನ್ನು ಮನಗಂಡ ಕುಂದಾಪುರ ತಾಲೂಕಿನ ಮೊಳಹಳ್ಳಿಯ ಪ್ರಗತಿಪರ ಕೃಷಿಕರೊಬ್ಬರು ಕಾಡುಪ್ರಾಣಿಗಳ ದಾಹ ನೀಗಿಸಲು ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.


ಕುಂದಾಪುರ ತಾಲೂಕಿನ ಮೊಳಹಳ್ಳಿ ನಿವಾಸಿ, ಪ್ರಗತಿಪರ ಕೃಷಿಕ ಪ್ರವೀಣ್ ಹೆಬ್ಗೋಳಿ ಅವರು ತಮ್ಮ ಮನೆ ಸನಿಹದ ಮೀಸಲು ಅರಣ್ಯ ಪ್ರದೇಶದಲ್ಲಿ ಎರಡು ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೈಜ ಪರಿಸರ ಪ್ರೇಮಕ್ಕೆ ಸಾಕ್ಷಿಯಾಗಿದ್ದಾರೆ.

ಪ್ರವೀಣ್ ಹೆಬ್ಗೋಳಿ ಅವರು ತಮ್ಮದೇ ಆದ `ಹೆಬ್ಗೋಳಿ ಕುಷ್ಟ ಅಗ್ರಿಕಲ್ಚರಲ್ ಕಂಪೆನಿ ' ವತಿಯಿಂದ ಈ ಕೊಡುಗೆಯನ್ನು ಪ್ರಕೃತಿಗೆ ಅರ್ಪಿಸಿದ್ದಾರೆ. ಶಿರಿಯಾರ ಹೆದ್ದಾರಿ ಮಠದ ಗುರುಮೂರ್ತಿ ಅಡಿಗ ಅವರು ಈ ನೀರಿನ ತೊಟ್ಟಿಗಳನ್ನು ಅನಾವರಣಗೊಳಿಸಿ ಎಚ್‌ಕೆಎಸಿ ಕಂಪೆನಿಯ ಪರಿಸರ ಪ್ರೇಮವನ್ನು ಶ್ಲಾಘಿಸಿದ್ದಾರೆ. 

ಕಡು ಬೇಸಗೆಯಲ್ಲಿ ನೀರಿನ ಮೂಲಗಳೆಲ್ಲಾ ಬತ್ತಿಹೋಗಿ ಕಂಗಲಾದ ಕಾಡು ಪ್ರಾಣಿಗಳು, ಪಕ್ಷಿಗಳು ನೀರಿಗಾಗಿ ಮಾನವನ ವಾಸಸ್ಥಳದತ್ತ ಮುಖ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಜೀವಕ್ಕೂ ಅಪಾಯವಿದೆ. ಕಾಡಿನಲ್ಲಿಯೇ ಕೃತಕ ನೀರಿನ ಮೂಲಗಳನ್ನು ನಿರ್ಮಿಸಿದರೆ, ಇಂತಹ ಅನಾಹುತಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ ನೈಜ ಪರಿಸರ ಪ್ರೇಮವನ್ನು ಮೆರೆದ ಕೃಷಿಕ ಪ್ರವೀಣ್ ಹೆಬ್ಗೋಳಿ ಅವರ ಈ ಪ್ರಯತ್ನ ಇತರರಿಗೆ ಮಾದರಿಯಾಗಿದೆ ಎಂದು ಗುರುಮೂರ್ತಿ ಅಡಿಗ ಅವರು ಶ್ಲಾಘಿಸಿದರು. 

ಮೊಳಹಳ್ಳಿಯ ಈ ಪ್ರದೇಶದಲ್ಲಿ ಸುಮಾರು 600 ಎಕರೆಯಷ್ಟು ಮೀಸಲು ಅರಣ್ಯವಿದೆ. ಎಲ್ಲಿಯೂ ನೀರಿನ ಮೂಲಗಳಿಲ್ಲ. ಈ ದೃಷ್ಟಿಯಿಂದ ಈ ನೀರಿನ ತೊಟ್ಟಿಯನ್ನು ನಿರ್ಮಿಸಿದ್ದೇನೆ. ಸುಮಾರು 500ಲೀ.ನಷ್ಟು ನೀರು ಇದರಲ್ಲಿ ತುಂಬುತ್ತದೆ. ಇದರಿಂದ ಸಾಕಷ್ಟು ಕಾಡು ಪ್ರಾಣಿಗಳಿಗೆ ನೀರಿನ ದಾಹ ನೀಗಬಹುದು ಎಂದು ಪ್ರವೀಣ್ ಹೆಬ್ಗೋಳಿ ಹೇಳಿದ್ದಾರೆ.

ಶಂಕರನಾರಾಯಣ ಸರಕಾರಿ ಕಾಲೇಜಿನ ಪ್ರಾಂಶುಪಾಲ ವೆಂಕಟರಮಣ ಭಟ್, ಪ್ರಗತಿಪರ ಕೃಷಿಕ ರಾಜೇಂದ್ರ ಬೆಚ್ಚಳ್ಳಿ, ಮೊಳಹಳ್ಳಿ ಘಟಕದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಎಸ್., ವಕೀಲ ಚಂದ್ರ ಪೂಜಾರಿ ಕೋಟೇಶ್ವರ ಉಪಸ್ಥಿತರಿದ್ದು, ಪ್ರವೀಣ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಷಿಕ ಪ್ರವೀಣ್ ಹೆಬ್ಗೋಳಿ ಅವರು ತಮ್ಮ ಮನೆ ಪರಿಸರದ ಸರಕಾರಿ ಕೆರೆಯೊಂದನ್ನು ತಮ್ಮದೇ ಖರ್ಚಿನಲ್ಲಿ ಅಭಿವೃದ್ಧಿ ಪಡಿಸಿ ಪ್ರಾಣಿ ಪಕ್ಷಿಗಳಿಗೆ ಅನುಕೂಲ ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.  

ಪರಿಸರ ಹಾಗೂ ಜೀವಸಂಕುಲವನ್ನು ಕಾಪಾಡುವುದು ಕೇವಲ ಮಾತಿನಲ್ಲಿ ಅಲ್ಲ, ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ತೋರಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಕಾರ್ಯವನ್ನು ಪ್ರವೀಣ್ ಹೆಬ್ಗೋಳಿ ಮಾಡಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.





Ads on article

Advertise in articles 1

advertising articles 2

Advertise under the article