ಮನೆ ಕಳವು ಪ್ರಕರಣ: ಅಂತರಾಜ್ಯ ಕಳ್ಳನ ಬಂಧನ
Tuesday, April 28, 2026
ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಂತರಾಜ್ಯ ಕಳವು ಆರೋಪಿಯೊಬ್ಬನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಕಾಪು ಪಕೀರ್ಣಕಟ್ಟೆಯ ಉಮೇಶ್ ಬಳೆಗಾರ ಬಂಧಿತ ಆರೋಪಿ. ಮಾ.5ರಂದು ಬೈಂದೂರು ಸೋಮೇಶ್ವರ ರಸ್ತೆಯಲ್ಲಿರುವ ಪಡುವರಿ ಗ್ರಾಮದ ಗುರುಕಿರಣ್ ಪಟ್ವಾಲ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣಗಳು ಮತ್ತು ನಗದು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು, ಎ.21ರಂದು ಪ್ರಕರಣದ ಆರೋಪಿ ಉಮೇಶ್ ಬಳೆಗಾರನನ್ನು ಬಂಧಿಸಿದರು. ತನಿಖೆ ವೇಳೆ ಆತ ಕಳವು ಮಾಡಿದ ಚಿನ್ನಾಭರಣಗಳನ್ನು ತಮಿಳುನಾಡು ಮದುರೈ ಕಡೆ ಮಾರಾಟ ಮಾಡುವುದಕ್ಕಾಗಿ ಗಟ್ಟಿ ಮಾಡಿಸಿ ಬಚ್ಚಿಟ್ಟಿರುವುದಾಗಿ ತಿಳಿಸಿದ್ದನು. ಅದರಂತೆ ತನಿಖಾಧಿಕಾರಿ ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ತನಿಖಾ ತಂಡದೊಂದಿಗೆ ತಮಿಳುನಾಡು ಮಧುರೈಗೆ ತೆರಳಿ, ಸುಮಾರು 2.81ಲಕ್ಷ ರೂ. ಮೌಲ್ಯದ ಒಟ್ಟು 22ಗ್ರಾಂ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ.