ಟೆಲಿಗ್ರಾಂ ಮೂಲಕ ಹೂಡಿಕೆ ಆಮಿಷ: ಲಕ್ಷಾಂತರ ರೂ. ವಂಚನೆ
Thursday, April 23, 2026
ಟೆಲಿಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಹೂಡಿಕೆ ಆಮಿಷ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಜಯಂತ್ ಅವರಿಗೆ ಸುಮಾರು ಎರಡು ವರ್ಷಗಳ ಹಿಂದೆ ಟೆಲಿಗ್ರಾಂನಲ್ಲಿ ಕಾರ್ತಿಕ್ ಎಂಬಾತ ಪರಿಚಯವಾಗಿದ್ದನು. ಬಳಿಕ 2026ರ ಜನವರಿ 15ರಂದು ವಾಟ್ಸಪ್ ಮೂಲಕ ಸಂಪರ್ಕಿಸಿದ ಆತ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾನೆ.
ನಂಬಿಕೆ ಹುಟ್ಟಿಸಲು ತನ್ನ ಆಧಾರ್ ಕಾರ್ಡ್, ಪಾಸ್ಪೋರ್ಟ್ ಪ್ರತಿಗಳು ಹಾಗೂ ಭಾವಚಿತ್ರವನ್ನು ಕಳುಹಿಸಿದ್ದು, ಅದರಲ್ಲಿ ಮಂಗಳೂರಿನ ಕಸಬಾ ಬೇಂಗ್ರೆ ನಿವಾಸಿ ಮಹಮ್ಮದ್ ಶಫೀಕ್ ಎಂಬ ಹೆಸರು ಉಲ್ಲೇಖವಾಗಿತ್ತು ಎಂದು ತಿಳಿದುಬಂದಿದೆ.
ಇದನ್ನು ನಂಬಿದ ಜಯಂತ್, ಆರೋಪಿಯು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 26,55,000 ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಹೂಡಿಕೆ ಮೊತ್ತ ಅಥವಾ ಲಾಭಾಂಶವನ್ನು ವಾಪಸು ನೀಡದೆ ಮೋಸ ಮಾಡಿರುವುದು ನಂತರ ತಿಳಿದುಬಂದಿದೆ.
ಈ ಕುರಿತು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.