ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಖರ್ಗೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು
Monday, April 27, 2026
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು "ಭಯೋತ್ಪಾದಕ" ಎಂದು ಕರೆದು ಅವಮಾನಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ ಇಂದು ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ನೀಡಿದ ನಿಯೋಗವು, ಖರ್ಗೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಧಿಕೃತ ದೂರು ಸಲ್ಲಿಸಿತು.
ಬಿಜೆಪಿ ಒಬಿಸಿ ಮೋರ್ಚಾ ಉಡುಪಿ ಜಿಲ್ಲಾ ಘಟಕವು ಖರ್ಗೆ ಅವರ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದು, ಪ್ರಧಾನಿ ಹುದ್ದೆ ಹಾಗೂ ದೇಶದ 140 ಕೋಟಿ ಜನರ ಭಾವನೆಗಳಿಗೆ ಖರ್ಗೆ ಅವರು ಅವಮಾನ ಮಾಡಿದ್ದಾರೆ. ಸೋಲಿನ ಭೀತಿಯಿಂದ ಕಾಂಗ್ರೆಸ್ ಪಕ್ಷವು ಇಂತಹ ಅಸಂವಿಧಾನಿಕ ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಪ್ರಚೋದನಕಾರಿ ಮಾತುಗಳು ಸಮಾಜದಲ್ಲಿ ಸೌಹಾರ್ದತೆ ಕೆಡಿಸಿ ಅಶಾಂತಿ ಸೃಷ್ಟಿಸುವ ಉದ್ದೇಶ ಹೊಂದಿವೆ.
ಸಂವಿಧಾನಕ್ಕೆ ಗೌರವ ಕೊಡುವ ಯಾರು ಕೂಡ ಇಂತಹ ಪದಬಳಕೆಯನ್ನು ಸಹಿಸುವುದಿಲ್ಲ. ದ್ವೇಷದ ರಾಜಕಾರಣ ನಿಲ್ಲಬೇಕು ಮತ್ತು ಕಾಂಗ್ರೆಸ್ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಐರೋಡಿ ವಿಠ್ಠಲ್ ಪೂಜಾರಿ, ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷರು ಹಾಗೂ ಉಡುಪಿ ಬಿಜೆಪಿ ಪ್ರಕೋಷ್ಠಗಳ ಸಂಯೋಜಕರಾದ ವಿಜಯ ಕೊಡವೂರು, ಬಿಜೆಪಿ ಒಬಿಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ವರಂಗ, ಮತ್ತು ನಗರಸಭಾ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಉಮೇಶ್ ನಾಯ್ಕ್ ಚೆರ್ಕಡಿ, ಉಡುಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಜಯಕರ್ ಆಚಾರ್ಯ, ನಗರಸಭಾ ನಿಕಟಪೂರ್ವ ಸದಸ್ಯರಾದ ಟಿ.ಜಿ. ಹೆಗ್ಡೆ ಹಾಗೂ ಮಂಜುನಾಥ್ ಮಣಿಪಾಲ, ಸುಭಾಷಿತ್, ಸಂತೋಷ್, ಅಶೋಕ್ ಶೆಟ್ಟಿಗಾರ್, ದೀಕ್ಷಿತ್ ದೇವಾಡಿಗ, ಚಿನ್ಮಯ, ಸುಶಾಂತ್, ರಾಜೇಂದ್ರ ಪಂದಿಬೆಟ್ಟು, ಪ್ರಮೋದ್ ಪಡುಕೆರೆ ಮೊದಲಾದವರು ಇದ್ದರು.
